ಚಿತ್ರಮಂದಿರ ಬಳಿಕ ಸಂಸತ್ತು, ಕೋರ್ಟ್‌ಗಳಲ್ಲೂ ರಾಷ್ಟ್ರಗೀತೆ ಕಡ್ಡಾಯ?
ಹೊಸದಿಲ್ಲಿ, ಎ.19: ಎಲ್ಲ ಚಿತ್ರಮಂದಿರಗಳಲ್ಲಿ ಸಿನೆಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಮಾಡಿದ ಬೆನ್ನಲ್ಲೇ, ಸಂಸತ್ತು/ ವಿಧಾನಮಂಡಲ, ಸಾರ್ವಜನಿಕ ಕಚೇರಿಗಳು, ನ್ಯಾಯಾಲಯ ಹಾಗೂ ಶಾಲೆಗಳಲ್ಲಿ ಕೂಡಾ ಕಾರ್ಯ ನಿರ್ವಹಿಸುವ ಎಲ್ಲ ದಿನಗಳಲ್ಲೂ ಹಾಡುವುದನ್ನು ಕಡ್ಡಾಯ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ.ಖನ್ವೀಲ್ಕರ್ ಹಾಗು ಎಂ.ಎಂ.ಶಾಂತನಗೌಡರ್ ಅವರನ್ನೊಳಗೊಂಡ ಪೀಠ ಈ ಸಂಬಂಧ ಅಭಿಪ್ರಾಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜವನ್ನು ಪ್ರಚಾರ ಮಾಡುವ ಸಂಬಂಧ ರಾಷ್ಟ್ರೀಯ ನೀತಿಯನ್ನು ರೂಪಿಸುವ ಬಗ್ಗೆಯೂ ಅಭಿಪ್ರಾಯ ನೀಡುವಂತೆ ಸೂಚಿಸಲಾಗಿದೆ.
ಬಿಜೆಪಿಯ ದಿಲ್ಲಿ ವಕ್ತಾರ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ನೋಟಿಸ್ ನೀಡಿದೆ. ಚಿತ್ರಮಂದಿರ ವ್ಯಾಪ್ತಿಯನ್ನು ಮೀರಿ ಈ ಆದೇಶವನ್ನು ಎಲ್ಲ ಸಾರ್ವಜನಿಕ ಕಚೇರಿ, ನ್ಯಾಯಾಲಯ ಹಾಗೂ ಶಾಸಕಾಂಗ ಸಂಸ್ಥೆಗಳಿಗೂ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದ್ದರು.







