ಫ್ರೂಟಿ ಪ್ರಿಯರೇ, ಈ ವರದಿಯನ್ನೊಮ್ಮೆ ಓದಿ
ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಗಳ ಈ 9 ಉತ್ಪನ್ನಗಳು ಬಳಕೆಗೆ ಅಯೋಗ್ಯ!

ಹೊಸದಿಲ್ಲಿ, ಎ.19: ದೇಶದಲ್ಲಿ ಮಾರಾಟವಾಗುವ ಅಗ್ರಗಣ್ಯ ಕಂಪೆನಿಗಳ ಆಹಾರಪದಾರ್ಥಗಳ ಗುಣಮಟ್ಟ ತೀರಾ ಕಳಪೆ ಎನ್ನುವ ಅಂಶ ಇದೀಗ ಬಹಿರಂಗವಾಗಿದೆ.
ರಾಜಸ್ಥಾನ, ತಮಿಳುನಾಡು, ಹರ್ಯಾಣ ಹಾಗೂ ಅಸ್ಸಾಂ ರಾಜ್ಯಗಳ ಆಹಾರ ಗುಣಮಟ್ಟ ನಿಯಂತ್ರಣ ಸಂಸ್ಥೆಗಳು ಆಹಾರ ಪದಾರ್ಥ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಬಹಳಷ್ಟು ವಸ್ತುಗಳ ಗುಣಮಟ್ಟ ನಿಗದಿತ ಮಟ್ಟದಲ್ಲಿ ಇಲ್ಲದಿರುವುದು ಪತ್ತೆಯಾಗಿದೆ. 2016ರ ಏಪ್ರಿಲ್‌ನಿಂದ 2017ರ ಜನವರಿವರೆಗೆ ಈ ವಸ್ತುಗಳ ಮಾದರಿ ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.
ಮಾಹಿತಿ ಹಕ್ಕು ಕಾಯ್ದೆಯಡಿ ಇಂಡಿಯನ್ ಎಕ್ಸ್ ಪ್ರೆಸ್ ಸಲ್ಲಿಸಿದ ಅರ್ಜಿಗೆ ಪಡೆದಿರುವ ಉತ್ತರದಲ್ಲಿ ಈ ಅಂಶ ಬಹಿರಂಗವಾಗಿದೆ. ಕಳಪೆ ಉತ್ಪನ್ನಗಳಲ್ಲಿ ಪೆಪ್ಸಿಕೋದ "ಮಿರಿಂಡ", ನೆಸ್ಲೆಯ "ಸಿರಿಲ್ಯಾಕ್ ವ್ಹೀಟ್", ಅದಾನಿ ಗುಂಪಿನ "ಫಾರ್ಚ್ಯೂನ್ ಎಣ್ಣೆ", ಮೇರಿಕೊ ಇಂಡಿಯಾದ "ಸಫೋಲಾ ಎಣ್ಣೆ", ಪಾರ್ಲೆ ಆಗ್ರೋ ಕಂಪೆನಿಯ "ಫ್ರೂಟಿ" ಹಾಗೂ "ಚೀಸ್" ಸೇರಿವೆ.
ಹೆರ್ಬಾಲೈಫ್‌ನ ಶಕ್ತಿದಾಯಕ ಪೇಯ, ಮುರುಗಪ್ಪ ಗುಂಪಿನ ಪ್ಯಾರಿ ಕುಡಿಯುವ ನೀರು, ಹಳ್ದಿರಾಮ್ ಅವರ ಆಲೂ ಭೂಜಿಯಾ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ. ಹಲವು ಪ್ರಕರಣಗಳಲ್ಲಿ ಈ ದೂರುಗಳನ್ನು ಪ್ರಶ್ನಿಸಲಾಗಿದ್ದು, ಮತ್ತೆ ಕೆಲ ಪ್ರಕರಣಗಳಲ್ಲಿ ಮಾದರಿಗಳ ಮರು ವಿಶ್ಲೇಷಣೆಗೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.
2017ರ ಜನವರಿ 12ರ ದಿನಾಂಕ ನಮೂದಿಸಿರುವ "ಮಿರಿಂಡಾ" ಗುಣಮಟ್ಟವನ್ನು ವಿಶ್ಲೇಷಿಸಿದ ಐದು ವರದಿಗಳು ಕೂಡಾ ಇದು ಕಳಪೆ ಗುಣಮಟ್ಟದಿಂದ ಕೂಡಿರುವುದು ಸುರಕ್ಷತಾ ಅಧಿಕಾರಿ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿವೆ. ಇದು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದೆ. ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಪ್ರಶ್ನಿಸಿದಾಗ, "ಕಾನೂನು ಕ್ರಮ ಕೈಗೊಳ್ಳಲು ಆಹಾರ ಹಾಗೂ ಔಷಧ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಆಯುಕ್ತರಿಗೆ ಪತ್ರ ಬರೆಯಲಾಗಿದೆ" ಎಂಬ ಉತ್ತರ ಬಂದಿದೆ. ಪದೇ ಪದೇ ಪರೀಕ್ಷೆ ನಡೆಸಿದಾಗಲೂ "ಕಳಪೆ ಗುಣಮಟ್ಟದ್ದು ಹಾಗೂ ಅಸುರಕ್ಷಿತ" ಎಂಬ ವರದಿಗಳು ಬಂದಿದೆ. ಆದರೆ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ, ಇದು ನಮ್ಮ ಕಚೇರಿಗೆ ಸಂಬಂಧಿಸಿದ್ದಲ್ಲ ಎಂಬ ಉತ್ತರ ಬಂದಿದೆ.
ಆದರೆ ಇದುವರೆಗೆ 2016ರ ಮೇ 18ರ ಒಂದು ವರದಿ ಮಾತ್ರ ನಮ್ಮ ಕೈಸೇರಿದೆ. ಇದರ ಮರು ವಿಶ್ಲೇಷಣೆಗೆ ಮನವಿ ಮಾಡಿದ್ದೇವೆ ಎನ್ನುವುದು ಪೆಪ್ಸಿಕೋ ಇಂಡಿಯಾ ಸಮರ್ಥನೆ. ಹೀಗೆ ಬಹುತೇಕ ಕಂಪೆನಿಗಳು ಕೂಡಾ ಮರು ವಿಶ್ಲೇಷಣೆಗೆ ಮನವಿ ಮಾಡಿದ್ದಾಗಿ ಹೇಳಿಕೊಂಡು ಜಾರಿಕೊಂಡಿವೆ. ಹರ್ಬಲ್‌ಲೈಫ್ ಇಂಟರ್‌ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಫ್ರೆಶ್ ಎನರ್ಜಿ ಡ್ರಿಂಕ್ ಮಿಕ್ಸ್ ಗುಣಮಟ್ಟವೂ ಕಳಪೆ ಎಂದು 2015ರ ಮೇ 30ರ ಪ್ರಯೋಗಾಲಯ ವರದಿ ಹೇಳಿದೆ. ಈ ಬಗ್ಗೆ ಎಡಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾಗಿ ಅಧಿಕಾರಿಗಳು ಹೇಳುತ್ತಾರೆ. ಕಂಪೆನಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಇದು ನ್ಯಾಯಾಲಯದಲ್ಲಿ ಇರುವ ಪ್ರಕರಣವಾಗಿರುವುದರಿಂದ ಅಭಿಪ್ರಾಯ ವ್ಯಕ್ತಪಡಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಸಬೂಬು ನೀಡಿದೆ.







