ನಿದ್ರೆಗೆ ಭಂಗ ತಂದ ಸಹೋದರನ ತಲೆಯನ್ನೇ ತೆಗೆದ!
ರಾಯ್ಪುರ, ಎ.19: ನಿದ್ರಾಭಂಗ ಮಾಡಿ, ಅಪಹಾಸ್ಯ ಮಾಡಿದ್ದಕ್ಕಾಗಿ ತನ್ನ ಸಹೋದರನನ್ನು ವ್ಯಕ್ತಿಯೊಬ್ಬ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಮುಂಭಾಗದಲ್ಲೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಛತ್ತೀಸ್ ಗಡದ ದೌನ್ ದಿಲ್ಹೋರಾ ದಲ್ಲಿ ನಡೆದಿದೆ.
ಮನೆಯಿಂದ ತನ್ನ ಸಹೋದರನನ್ನು ಎಳೆದುಕೊಂಡು ಬಂದ ಆರೋಪಿ ಸುರೇಶ್ ಕುಮಾರ್ ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕೈ ಹಾಗೂ ತಲೆಯನ್ನು ಕತ್ತರಿಸಿ ಹಾಕಿದ್ದಾನೆ, ನಂತರ ರಕ್ತಸಿಕ್ತ ಕೊಡಲಿಯೊಂದಿಗೆ ಮಾಂಗ್ ಚುವಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸುರೇಶ್ ನ ಸಹೋದರ ಚಿಂತೂರಾಮ್ ನ ಧ್ವನಿ ಗಡುಸಾಗಿತ್ತು. ಆತ ಹಾಡುಗಳನ್ನು ಹಾಡಿ ಸುರೇಶ್ ನನ್ನು ಅಪಹಾಸ್ಯ ಮಾಡುತ್ತಿದ್ದ. ಇವರಿಬ್ಬರ ನಡುವೆ ಆಗಾಗ ಜಗಳಗಳಾಗುತ್ತಿದ್ದು, ಇವರ ದೈನಂದಿನ ಗಲಾಟೆಯಿಂದ ಪತ್ನಿಯರು ರೋಸಿ ಹೋಗಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಂಗಳವಾರ ಇಬ್ಬರೂ ಸಹೋದರರು ಒಂದೇ ಕೋಣೆಯಲ್ಲಿ ಮಲಗಿದ್ದ ಸಂದರ್ಭ ಚಿಂತೂರಾಮ್ ಹಾಡಲು ಆರಂಭಿಸಿದ್ದ. ಈ ಸಂದರ್ಭ ಕೋಪಗೊಂಡ ಸುರೇಶ್ ಆತನ ಮೇಲೆ ಹಲ್ಲೆ ನಡೆಸಿದ್ದಾನೆ, ಸಹೋದರನನ್ನು ಹೆದರಿಸುವ ಸಲುವಾಗಿ ಚಿಂತೂರಾಮ್ ಕೊಡಲಿಯನ್ನು ಎತ್ತಿಕೊಂಡಿದ್ದ. ಈ ಸಂದರ್ಭ ಆತನಿಂದ ಕೊಡಲಿ ಕಿತ್ತುಕೊಂಡ ಸುರೇಶ್ ಚಿಂತೂರಾಮ್ ನನ್ನು ಎಳೆದುಕೊಂಡು ಊರಿನ ಮುಖ್ಯಭಾಗದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಕೈಗಳನ್ನು ಹಾಗೂ ತಲೆಯನ್ನು ಕಡಿದಿದ್ದಾನೆ ಎನ್ನಲಾಗಿದೆ.