ಸೋನು ವಿವಾದದ ಬೆನ್ನಿಗೇ ಅಝಾನ್ ಅನ್ನು ಪ್ರಶಂಸಿಸಿದ ಪ್ರಿಯಾಂಕಾ ವೀಡಿಯೊ ವೈರಲ್

ಮುಂಬೈ, ಎ. 19 : ಖ್ಯಾತ ಗಾಯಕ ಸೋನು ನಿಗಮ್ ಅಝಾನ್ ಕುರಿತು ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿರುವ ಬೆನ್ನಿಗೇ ಅವರ ಪರ ವಿರೋಧ ಹೇಳಿಕೆಗಳ ಮಹಾಪೂರವೇ ಹರಿದು ಬಂದಿದೆ. ಬೇರೆ ಕ್ಷೇತ್ರಗಳಂತೆ ಬಾಲಿವುಡ್ ನಲ್ಲೂ ಸೋನು ಹೇಳಿಕೆಗೆ ಕಲಾವಿದರೂ ಪರ ವಿರೋಧ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಟಿ, ನಿರ್ಮಾಪಕಿ ಪೂಜಾ ಭಟ್ ಸೋನು ಹೇಳಿಕೆಗೆ ವಿರುದ್ಧವಾಗಿ ತಾನು ಅಝಾನ್ ಹಾಗು ಚರ್ಚ್ ಗಂಟೆಗಳನ್ನು ಕೇಳಿ ಎದ್ದೇಳುವ ಬಗ್ಗೆ ನೀಡಿದ ಹೇಳಿಕೆ ಭಾರೀ ಚರ್ಚೆಯಲ್ಲಿತ್ತು.
ಈಗ ಪ್ರಿಯಾಂಕಾ ಚೋಪ್ರಾ ಸರದಿ. ಅವರ ಹಳೆಯ ವೀಡಿಯೊವೊಂದು ಈಗ ವೈರಲ್ ಆಗಿದೆ. ಬಾಲಿವುಡ್ ನ ಹಾಲಿವುಡ್ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪ್ರಿಯಾಂಕಾ ತಮ್ಮ ಗಂಗಾಜಲ್ 2 ಚಿತ್ರದ ಚಿತ್ರೀಕರಣಕ್ಕೆ ಭೋಪಾಲ್ ನಲ್ಲಿದ್ದಾಗ ಮಾತನಾಡಿರುವ ವೀಡಿಯೊ ಇದು.
" ಭೋಪಾಲ್ ನಲ್ಲಿ ಸಂಜೆ ಎಲ್ಲ ಮಸೀದಿಗಳಿಂದ ಒಮ್ಮೆಲೇ ಅಝಾನ್ ಕೇಳಿ ಬರುವಾಗ ಮನಸ್ಸಿಗೆ ಬಹಳ ಆಹ್ಲಾದಕರ ಅನುಭವ ಉಂಟಾಗುತ್ತದೆ. ನನ್ನ ಟೆರೇಸ್ ಗೆ ಒಟ್ಟಿಗೆ ಆರು ಮಸೀದಿಗಳಿಂದ ಅಝಾನ್ ಕೇಳುತ್ತದೆ. ಆ ಐದು ನಿಮಿಷಗಳಲ್ಲಿ ಒಂದು ವಿಚಿತ್ರ ಶಾಂತಿ ನನ್ನದಾಗುತ್ತದೆ. ಅದು ನನ್ನ ಫೆವರಿಟ್ ಗಳಿಗೆ. ಅಝಾನ್ ನನ್ನ ಪಾಲಿಗೆ ಸುಮಧುರ ಸಂಗೀತ " ಎಂದು ಪ್ರಿಯಾಂಕಾ ಹೇಳಿರುವ ಈ ವೀಡಿಯೊ ಈಗ ಇಂಟರ್ನೆಟ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವೀಡಿಯೊ ಇಲ್ಲಿದೆ :