ಸೈಕಲ್‌ನಲ್ಲಿ ಸಹೋದರನ ಮೃತದೇಹ ಸಾಗಿಸಿದ ಬಾಲಕ!
ಅಸ್ಸಾಂ ಸರಕಾರದಿಂದ ತನಿಖೆಗೆ ಆದೇಶ

ಬ್ರಹ್ಮಪುತ್ರ, ಎ.19: ದೇಶದ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮತ್ತೊಂದು ಘಟನೆ ಬಿಜೆಪಿ ಆಡಳಿತವಿರುವ ಅಸ್ಸಾಂನಿಂದ ವರದಿಯಾಗಿದೆ.
ಆ್ಯಂಬುಲೆನ್ಸ್‌ನ ಮೂಲಕ ತನ್ನ ಹಳ್ಳಿಗೆ ತಲುಪಲು ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಬಾಲಕನೊಬ್ಬ ತನ್ನ ಸಹೋದರನ ಮೃತದೇಹವನ್ನು ಸೈಕಲ್‌ನಲ್ಲಿ ಸಾಗಿಸಿಕೊಂಡು ಹೋಗಿದ್ದ ಘಟನೆ ಇತ್ತೀಚೆಗೆ ನಡೆದಿದೆ. ಘಟನೆಯ ವಿಡಿಯೋದಲ್ಲಿ ವೀಕ್ಷಿಸಿ ಎಚ್ಚೆತ್ತುಕೊಂಡಿರುವ ಒಡಿಶಾ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಲ್ಲದೆ, ಶೀಘ್ರವೇ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಬ್ರಹ್ಮಪುತ್ರದ ಮಜುಲಿ ದ್ವೀಪಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕನ ಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಿದಿರುನಿಂದ ನಿರ್ಮಿಸಲ್ಪಟ್ಟಿದ್ದು, ಆ್ಯಂಬುಲೆನ್ಸ್‌ಗಳಿಗೆ ಈ ಸೇತುವೆ ಮೇಲೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಬಾಲಕ ಅಣ್ಣನ ಮೃತದೇಹದ ಅಂತ್ಯಸಂಸ್ಕಾರಕ್ಕಾಗಿ ಸೈಕಲಿನಲ್ಲಿ ಮನೆಗೆ ಕೊಂಡೊಯ್ದಿದ್ದಾನೆ. ಬಾಲಕನ ಅಣ್ಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಹಳ್ಳಿಗೆ ಧಾವಿಸಿ, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ತನಿಖೆ ನಡೆಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಸೋನೊವಾಲ್ ಆರೋಗ್ಯ ಸೇವೆಯ ನಿರ್ದೇಶಕರಿಗೆ ಆದೇಶಿಸಿದ್ದಾರೆ.







