ತನ್ನವಿರುದ್ಧವೇ ಮತ ಹಾಕಿ, ಅಧಿಕಾರವನ್ನು ಉಳಿಸಿಕೊಂಡ ನಗರಸಭಾ ಅಧ್ಯಕ್ಷ

ತಿರುವಲ್ಲ(ಕೇರಳ), ಎ. 19: ತನ್ನ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಪರ ಮತಚಲಾಯಿಸಿ ತಿರುವಲ್ಲ ನಗರಸಭಾ ಅಧ್ಯಕ್ಷ ಕೆ.ವಿ.ವರ್ಗಿಸ್ ಇತಿಹಾಸ ಸೃಷ್ಟಿಸಿದ್ದಾರೆ.ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷದಿಂದ ಉಚ್ಚಾಟಿಸಲ್ಪಡುವುದನ್ನು ತಪ್ಪಿಸುವುದಕ್ಕಾಗಿ ವರ್ಗೀಸ್ ಈ ತಂತ್ರ ಹೂಡಿದ್ದರು. ಅವಿಶ್ವಾಸ ನಿರ್ಣಯಕ್ಕೆ ಅಗತ್ಯವಿರುವಷ್ಟು ಕೋರಂ ಇಲ್ಲದಂತೆ ನೋಡಿಕೊಂಡು ಅವಿಶ್ವಾಸ ನಿರ್ಣಯವನ್ನೇ ವಿಫಲಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹೀಗೆ ಅಧಿಕಾರ ಮತ್ತು ಪಕ್ಷ ಎರಡನ್ನೂ ತನ್ನ ಬಳಿಯೇ ಅವರು ಉಳಿಸಿಕೊಂಡು ಚಕಿತಗೊಳಿಸಿದರು.
ವರ್ಗೀಸ್ ಕಾಂಗ್ರೆಸ್‌ನ ಪ್ರತಿನಿಧಿಯಾಗಿದ್ದಾರೆ. ಆಡಳಿತ ವೈಫಲ್ಯವನ್ನು ಬೆಟ್ಟು ಮಾಡಿ ಯುಡಿಎಫ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. 39 ಸದಸ್ಯರ ನಗರಸಭೆಯಲ್ಲಿ ಕೇರಳ ಕಾಂಗ್ರೆಸ್(ಎಂ), ಸಹಿತ 22 ಸದಸ್ಯರನ್ನು ಯುಡಿಎಫ್ ಹೊಂದಿದೆ. ಇವರಲ್ಲಿ ಕೇರಳ ಕಾಂಗ್ರೆಸ್‌ನ ಹತ್ತು ಮಂದಿ, ಮತ್ತು ಕಾಂಗ್ರೆಸ್‌ನ ಹನ್ನೊಂದು ಮಂದಿ ಹಾಗೂಆರ್‌ಎಸ್ಪಿಯ ಒಬ್ಬ ಸದಸ್ಯರಿದ್ದಾರೆ. ಒಪ್ಪಂದದಂತೆ ಬೇರೆಯವರಿಗೆ ಅಧಿಕಾರವರ್ಗಾಯಿಸಲು ವರ್ಗೀಸ್ ನಿರಾಕರಿಸಿದ್ದರಿಂದ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು. ಅವಿಶ್ವಾಸ ನಿರ್ಣಯದಲ್ಲಿ ಕೋರಂಗೆ ಅಗತ್ಯವಿರುವಷ್ಟು ಸದಸ್ಯರು ಭಾಗವಹಿಸುವುದಿಲ್ಲ ಎನ್ನುವುದು ಖಾತ್ರಿಯಾದ ಬಳಿಕವೇ ವರ್ಗಿಸ್ ಸಭೆಗೆ ಬಂದು ತಾನೂ ತನ್ನ ವಿರುದ್ಧವೇ ಮತ ಹಾಕಿದ್ದಾರೆ. ವರ್ಗಿಸ್ ವಿರುದ್ಧ ಅವಿಶ್ವಾಸ ನಿರ್ಣಯ ಪಾಸಾಗಿತ್ತು. ಆದರೆ ಅದು ಜಾರಿಗೆ ಬರಬೇಕಿದ್ದರೆ 20 ಮಂದಿ ಸದಸ್ಯರು ಸಭೆಯಲ್ಲಿರಬೇಕು. ಆದರೆ ಸಭೆಯಲ್ಲಿ ಹದಿನೆಂಟು ಮಂದಿ ಇದ್ದುದರಿಂದ ವರ್ಗೀಸ್ ಸೋತುಗೆದ್ದಿದ್ದಾರೆ. ನಿರ್ಣಯ ತಡೆಹಿಡಿಯಲ್ಪಟ್ಟಿದೆ.
ಕಾಂಗ್ರೆಸ್‌ನ ವಿಫ್ ಉಲ್ಲಂಘಿಸಿ ಮೂವರು ಸಭೆಗೆ ಹಾಜರಾಗಿರಲಿಲ್ಲ. ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಎಂಎಂ ಹಸನ್‌ರ ಸೂಚನೆ ಮೇರೆಗೆ ಪಕ್ಷದಿಂದ ವಜಾಗೊಳಿಸಲಾಗಿದೆ. ಆದರೆ ವರ್ಗಿಸ್ ತಂತ್ರಗಾರಿಕೆಯಲ್ಲಿ ನಗರಸಭಾ ಅಧ್ಯಕ್ಷ ಸ್ಥಾನವನ್ನೂ ಪಕ್ಷದ ಸದಸ್ಯ ಸ್ಥಾನವನ್ನೂ ಉಳಿಸಿಕೊಂಡಿದ್ದಾರೆ.