ಕೇರಳ, ದಿಲ್ಲಿ ಮುಖ್ಯಮಂತ್ರಿಗಳ ನಡುವೆ ಮಾತುಕತೆ: ಹೊಸ ರಾಜಕೀಯದ ಆರಂಭ ಎಂದ ಕೇಜ್ರಿವಾಲ್

ಹೊಸದಿಲ್ಲಿ,ಎ.19: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಳಗ್ಗೆ ಎಂಟೂವರೆಗಂಟೆಗೆ ಕೇರಳ ಹೌಸ್‌ಗೆ ಬಂದ ಕೇಜ್ರಿವಾಲ್ ಅರ್ಧಗಂಟೆ ಪಿಣರಾಯಿಯವರೊಡನೆ ಚರ್ಚಿಸಿದ್ದಾರೆ.
ದೇಶೀಯ ಮಟ್ಟದಲ್ಲಿಬಿಜೆಪಿ ವಿರೋಧಿ ರಂಗವೊಂದು ನಿತೀಶ್ ಕುಮಾರ್ ಮುಂತಾದವರ ನೇತೃತ್ವದಲ್ಲಿ ಆರಂಭಗೊಳ್ಳುತ್ರಿರುವ ವೇಳೆ ಪಿಣರಾಯಿ, ಕೇಜ್ರಿವಾಲ್ ಚರ್ಚಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯನ್ನು ತಡೆಯಲಿಕ್ಕಾಗಿ ಕಾಂಗ್ರೆಸ್‌ನ ಜೊತೆ ಸಹಮತದಿಂದ ಸಾಗಲು ಸಾಧ್ಯವಿಲ್ಲ ಎಂದು ಮಾತುಕತೆಯ ನಂತರ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆದರೆ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆಮಾಡಿಕೊಳ್ಳುವ ಬಗ್ಗೆ ಆಲೋಚಿಸಬಹುದೆಂದು ಅವರು ಹೇಳಿದರು.
ದೇಶದಲ್ಲಿ ಈಗ ನೆಲೆಯಾಗಿರುವುದು ಭೀತಿಯ ರಾಜಕೀಯ ಎಂದು ಅರವಿಂದ್ ಕೇಜ್ರಿವಾಲ್ ಭೇಟಿಯ ನಂತರ ಹೇಳಿದ್ದಾರೆ. ಕೇಂದ್ರದ ವಿರುದ್ಧ ಧ್ವನಿಎತ್ತುವವರನ್ನು ಮೂಕರನ್ನಾಗಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಕೇರಳ ಮುಖ್ಯಮಂತ್ರಿಯೊಂದಿಗೆ ತನ್ನ ಭೇಟಿ ಹೊಸರಾಜಕೀಯದ ಆರಂಭವೆಂದು ಅವರು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಕೇಜ್ರಿವಾಲ್ ಮತ್ತು ಪಿಣರಾಯಿ ವಿಜಯನ್ ಮೊದಲ ಬಾರಿ ಪರಸ್ಪರ ಭೇಟಿಯಾಗಿದ್ದಾರೆ.





