ಎಸ್.ಎಂ.ಕೃಷ್ಣರ ಮೊಮ್ಮಗ ಕಾಂಗ್ರೆಸ್ ಗೆ ಸೇರ್ಪಡೆ

ಬೆಂಗಳೂರು, ಎ.19: ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್.ಎಂ. ಕೃಷ್ಣ ಅವರ ಅಕ್ಕನ ಮೊಮ್ಮಗ ಡಾ. ನಿರಂತರ ಗಣೇಶ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರೂ ಆಗಿರುವ ಡಾ. ನಿರಂತರ ಗಣೇಶ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಸಂದರ್ಭ ಮಾತನಾಡಿದ ದಿನೇಶ್ ಗುಂಡೂರಾವ್, ನಿರಂತರ ಗಣೇಶ್ ಒಳ್ಳೆಯ ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ದೇಶದ ಪರಿಸ್ಥಿತಿ ಅರಿತುಕೊಂಡು ಕಾಂಗ್ರೆಸ್ ಗೆ ಸೇರ್ಪಡೆಗೆಯಾಗಿದ್ದಾರೆ. ಅವರ ಜೊತೆ 30ಕ್ಕೂ ಹೆಚ್ಚು ವೈದ್ಯರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.
ಡಾ. ನಿರಂತರ ಗಣೇಶ್ ಮಾತನಾಡಿ, ಜನರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ತನ್ನ ತಂದೆ-ತಾಯಿ ಹೇಳುತ್ತಿದ್ದರು. ವಾರದಲ್ಲಿ ಎರಡು ದಿನ ಹಳ್ಳಿ ಹಳ್ಳಿಗೆ ತೆರಳಿ ಬಡವರಿಗೆ ಉಚಿತ ಚಿಕಿತ್ಸೆ ನೀಡಿದ್ದೇನೆ. ಕಡೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಾಗ ಸ್ಪಂದಿಸಿದ್ದೆ. ಜನರು "ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು" ಎಂದು ಒತ್ತಾಯ ಮಾಡಿದ್ದರು. ಇದೇ ಕಾರಣಕ್ಕೆ ರಾಜಕೀಯಕ್ಕೆ ಬಂದೆ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜಕೀಯ ಪ್ರೇರಣೆ ಎಂದರು.







