ಪಕ್ಷದಿಂದ ದೂರ ಉಳಿಯುತ್ತೇನೆ : ದಿನಕರನ್

ಚೆನ್ನೈ, ಎ.19: ‘‘ನಾನೀಗ ಪ್ರಬುದ್ಧನಾಗಿದ್ದೇನೆ. ತನ್ನ ಪಕ್ಷದವರು ತನ್ನನ್ನು ಮೂಲೆ ಗುಂಪು ಮಾಡಿದ್ದಕ್ಕೆ ಬೇಸರವಿಲ್ಲ. ಇನ್ನು ಮುಂದೆ ಪಕ್ಷದ ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದಿಂದ ದೂರ ಉಳಿಯತ್ತೇನೆ’’ ಎಂದು ಎಐಎಡಿಎಂಕೆ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಬುಧವಾರ ಹೇಳಿದ್ದಾರೆ.
ಕಳೆದ ರಾತ್ರಿ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ಚೆನ್ನೈನಲ್ಲಿ ಸಭೆ ಸೇರಿದ್ದ ಎಐಎಡಿಎಂಕೆಯ 10 ಪ್ರಮುಖ ನಾಯಕರು, ಪಕ್ಷದ ಪ್ರಮುಖ ನಾಯಕ ದಿನಕರನ್ ಹಾಗೂ ಪಕ್ಷದ ಮುಖ್ಯಸ್ಥೆ ವಿ.ಕೆ. ಶಶಿಕಲಾರನ್ನು ಪಕ್ಷದಿಂದ ಹೊರ ಹಾಕುವ ನಿರ್ಧಾರಕ್ಕೆ ಬಂದಿತ್ತು. ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವ ನೇತೃತ್ವದಲ್ಲಿ ಪಕ್ಷ ಮತ್ತೆ ವಿಲೀನವಾಗುವ ಬಗ್ಗೆ ಚರ್ಚೆ ನಡೆದಿತ್ತು.
ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರುವ ಮೊದಲು ಇ. ಪಳನಿಸ್ವಾಮಿಯನ್ನು ಮುಖ್ಯಮಂತ್ರಿಯಾಗಿಯೂ, ಸಂಬಂಧಿ ದಿನಕರನ್‌ನನ್ನು ಪಕ್ಷದ ಉಪಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಆದರೆ, ಜಯಲಲಿತಾರ ನಿಧನದಿಂದಾಗಿ ತೆರವಾಗಿದ್ದ ಆರ್‌ಕೆ ನಗರ ಉಪ ಚುನಾವಣೆಗೆ ಪಕ್ಷದ ಚಿಹ್ನೆಯನ್ನು ತನ್ನದಾಗಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಲಂಚ ನೀಡಲು ಯತ್ನಿಸಿದ್ದು ಸೇರಿದಂತೆ ಗಂಭೀರ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ದಿನಕರನ್ ಯಾವುದೇ ಸಮಯದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ.