ಜಾಧವ್‌ಗೆ ಮರಣ ದಂಡನೆ : ಪಾಕ್ ನಿರ್ಮಿತ ಉಡುಪುಗಳನ್ನು ಮಾರದಂತೆ ಮುಂಬೈ ಶೋ ರೂಮ್‌ಗೆ ಎಂಎನ್‌ಎಸ್ ಬೆದರಿಕೆ

ಮುಂಬೈ,ಎ.19: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ಅವರಿಗೆ ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಮರಣ ದಂಡನೆಯನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಎಂಎನ್‌ಎಸ್ ಕಾರ್ಯಕರ್ತರು ಇಲ್ಲಿಯ ಲೋವರ್ ಪರೇಲ್‌ನ ಪಲ್ಲಾಡಿಯಂ ಮಾಲ್‌ನಲ್ಲಿರುವ ‘ಝರಾ ’ ಉಡುಪುಗಳ ಮಳಿಗೆಗೆ ನುಗ್ಗಿ ದಾಂಧಲೆ ನಡೆಸಿ, ಪಾಕಿಸ್ತಾನದಲ್ಲಿ ತಯಾರಾದ ಬಟ್ಟೆಗಳನ್ನು ಮಾರಾಟ ಮಾಡದಂತೆ ಬೆದರಿಕೆಯೊಡ್ಡಿದೆ. ರೀತಾ ಗುಪ್ತಾ ನೇತೃತ್ವದ ಕಾರ್ಯಕರ್ತರು ಪಾಕಿಸ್ತಾನದ ಬಟ್ಟೆಗಳ ವಿಭಾಗವನ್ನೇ ಮುಚ್ಚುವಂತೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲಿ ಜಾಧವ್ ವಿರುದ್ಧ ಅನ್ಯಾಯವಾಗಿ ಕಾನೂನು ಕ್ರಮ ಜರುಗಿಸಲಾಗಿದೆ ಮತ್ತು ಇಲ್ಲಿ ಪಾಕಿಸ್ತಾನದ ಉಡುಪುಗಳ ಮಾರಾಟಕ್ಕೆಂದೇ ಪ್ರತ್ಯೇಕ ವಿಭಾಗಗಳಿವೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಗುಪ್ತಾ, ಪಾಕ್ ಬಟ್ಟೆಗಳನ್ನು ಮಾರಾಟದಿಂದ ಹಿಂದೆಗೆದುಕೊಳ್ಳದಿದ್ದರೆ ಎಂಎನ್‌ಎಸ್ ತನ್ನದೇ ಆದ ರೀತಿ (ಹಿಂಸಾತ್ಮಕ)ಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಕೆಲವು ದಿನಗಳಿಂದ ಆಕ್ರಮಣಕಾರಿ ಧೋರಣೆ ತಳೆದಿರುವ ಎಂಎನ್‌ಎಸ್ ಜಾಧವ್ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಕೇಂದ್ರದ ಕ್ರಮಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಹೋರ್ಡಿಂಗ್‌ಗಳನ್ನು ಹಾಕುತ್ತಿದೆ. ಜಾಧವ್ ಮಹಾರಾಷ್ಟ್ರೀಯರಾಗಿದ್ದು, ಮುಂಬೈ ನಿವಾಸಿಯಾಗಿದ್ದಾರೆ.







