ರಾಜ್ಯದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸುಧಾರಿತ ಗಸ್ತು ವ್ಯವಸ್ಥೆ ಜಾರಿ
ಚಿಕ್ಕಮಗಳೂರು, ಜ.19: ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ನಿರ್ದೇಶನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತಿ ಸಣ್ಣ ಆಡಳಿತಾತ್ಮಕ ಕಾರ್ಯನಿರ್ವಹಣಾ ಘಟಕ ಎಂಬ ಪರಿಕಲ್ಪನೆಯೊಂದಿಗೆ ಸುಧಾರಿತ ಗಸ್ತು ವ್ಯವಸ್ಥೆಯನ್ನು ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.1 ರಿಂದ ಜಾರಿಗೊಳಿಸಲಾಗಿದೆ.
ಈ ಯೋಜನೆಯಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿರುವ ಪ್ರತಿಯೊಬ್ಬ ಹೆಡ್ ಕಾನ್‌ಸ್ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಸಂಖ್ಯೆಗೆ ಅನುಗುಣವಾಗಿ ಅಷ್ಟೆ ಸಂಖ್ಯೆಯಲ್ಲಿ ಬೀಟಿನ ಭೌಗೋಳಿಕ ವ್ಯಾಪ್ತಿಯನ್ನು ವಿಂಗಡಿಸಿ ಪುನರ್ರಚಿಸಲಾಗಿದೆ. ‘ಪ್ರದೇಶಕ್ಕೊಬ್ಬ ಪೊಲೀಸ್’ ಎಂಬ ತತ್ವದಡಿಯಲ್ಲಿ ಈ ವ್ಯವಸ್ಥೆಯು ಪೊಲೀಸ್ ಕೆಲಸವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಮತ್ತು ಸಾರ್ವಜನಿಕ ಸಮುದಾಯದೊಂದಿಗೆ ಪೊಲೀಸರ ಬಾಂಧವ್ಯವನ್ನು ಇನ್ನೂ ಹೆಚ್ಚು ಬಲಗೊಳಿಸಿ ಪರಸ್ಪರ ಸಂಬಂಧವನ್ನು ವೃದ್ಧಿಸಲು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
ಪ್ರತಿ ಪೊಲೀಸ್ ಠಾಣೆಯ ಎಲ್ಲಾ ಕೆಲಸಗಳಲ್ಲಿಯೂ ಪ್ರತಿಯೊಬ್ಬ ಸಿಬ್ಬಂದಿ ಸಮಾನವಾಗಿ ಭಾಗವಹಿಸುವ ಅವಕಾಶ ದೊರಕಿಸಿ ಕೊಡುವುದು ಮತ್ತು ಎಲ್ಲರೂ ಸಮಾನರು ಎಂಬ ಭಾವನೆಯಿಂದ ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುವುದು ಇದರ ಮೂಲ ಉದ್ದೇಶವಾಗಿದೆ. ಸುಧಾರಿತ ಬೀಟ್ ವ್ಯವಸ್ಥೆಯು ಅತ್ಯಂತ ಸಣ್ಣ ಘಟಕವಾದರೂ ಪೊಲೀಸ್ ಇಲಾಖೆಯ ದ್ಯೆನಂದಿನ ಕರ್ತವ್ಯ ನಿರ್ವಹಣೆಯ ದೃಷ್ಠಿಯಲ್ಲಿ ಪ್ರಮುಖ ಘಟಕವಾಗಿದೆ.
ಈ ವ್ಯವಸ್ಥೆಯನ್ವಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಲಿ ಇರುವ ಒಟ್ಟು 206 ಬೀಟ್‌ಗಳನ್ನು ಮಾರ್ಪಾಡುಗೊಳಿಸಿ ಎಲ್ಲಾ ಠಾಣೆಗಳ ಕಾನ್‌ಸ್ಟೇಬಲ್ ಮತ್ತು ಹೆಡ್‌ಕಾನ್‌ಸ್ಟೇಬಲ್ ಸಂಖ್ಯೆಗೆ ಅನುಗುಣವಾಗಿ ಮತ್ತು ಭೌಗೋಳಿಕ ವ್ಯಾಪಿಗೆ ಅನುಗುಣವಾಗಿ ವಿಂಗಡಿಸಿ 656 ಬೀಟ್‌ಗಳಾಗಿ ವಿಭಜಿಸಿಲಾಗಿದೆ. ಪ್ರತಿ ಬೀಟ್‌ನಲ್ಲಿ ಬೀಟ್‌ಗೆ ನೇಮಕಗೊಂಡ ಸಿಬ್ಬಂದಿ, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಒಟ್ಟು ಬೀಟ್ ಸಂಖ್ಯೆ, ಬೀಟ್ ಪೊಲೀಸ್ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ, ಬೀಟ್ ಉಸ್ತುವಾರಿ ಅಧಿಕಾರಿಗಳ ವಿವರಗಳು, ಬೀಟ್‌ನಲ್ಲಿ ಬರುವ ಪ್ರದೇಶಗಳ ವಿವರ ಮತ್ತು ಬೀಟ್ ನಕ್ಷೆಯನ್ನು ಠಾಣೆಯಲ್ಲಿ ಎದ್ದು ಕಾಣುವಂತೆ ಫಲಕದಲ್ಲಿ ಪ್ರದರ್ಶಿಸಲಾಗುವುದು. ಅದೇ ರೀತಿ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ಸುಧಾರಿತ ಬೀಟ್ ವ್ಯವಸ್ಥೆಯ ಮಾಹಿತಿಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವೆಬ್‌ಸೈಟ್ www.ckmpolice.in ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಸದುಪಯೋಗಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.







