ಎ.27, 28: ಬಹರೈನ್‌ನಲ್ಲಿ ಯಕ್ಷ ಸಂಭ್ರಮ
ಮೂಡುಬಿದಿರೆ, ಎ.19: ಯಕ್ಷ ಸಂಭ್ರಮ-2017 ಬಹರೈನ್ ಮನಾಮ ‘ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಎ.27 ಮತ್ತು 28ರಂದು ನಡೆಯಲಿದ್ದು, ಮೂಡುಬಿದಿರೆ ಸೇರಿದಂತೆ ಕರಾವಳಿ ಕಲಾವಿದರು ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ ಎಂದು ಯಕ್ಷಸಂಗಮದ ಸಂಚಾಲಕ ಎಂ.ಶಾಂತರಾಮ ಕುಡ್ವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.27ರಂದು ‘ಕೃಷ್ಣಾರ್ಜುನ ಕಾಳಗ’ ತಾಳಮದ್ದಳೆ ಕೂಟ, ‘ದಕ್ಷಾಧ್ವಶಿ-ಗಿರಿಜಾ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ಹಾಗೂ ‘ಯಕ್ಷಗಾನ ವಿಚಾರ ಸಂಕಿರಣ’ ಜರಗಲಿದೆ. ಬಹರೈನ್‌ನಲ್ಲಿರುವ ದ.ಕ. ಜಿಲ್ಲೆಯ ಯಕ್ಷಗಾನ ಅಭಿಮಾನಿಗಳು, ಹವ್ಯಾಸಿ ಯಕ್ಷಗಾನ ಕಲಾವಿದರು ಆಯೋಜಿಸಿದ ಈ ಕಾರ್ಯಕ್ರಮ ‘ಬಹರೈನ್ ಕನ್ನಡ ಸಂಘ’ದ ಆಶ್ರಯದಲ್ಲಿ ನಡೆಯಲಿದೆ.
ಪ್ರಸಿದ್ಧ ಭಾಗವತ ಬಲಿಪ ಶಿವಶಂಕರ ಭಟ್, ಚೆಂಡೆ ವಾದಕ ಅಡ್ಡೂರ್ ಗಣೇಶ್ ರಾವ್, ಹಿಮ್ಮೇಳನದಲ್ಲಿ ಸಹಕರಿಸಿದರೆ, ಮುಮ್ಮೇಳದಲ್ಲಿ ಉಜಿರೆ ಅಶೋಕ್ ಭಟ್, ಜಬ್ಬಾರ್ ಸಮೋ ಹಾಗೂ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಮುಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಯಕ್ಷಸಂಗಮ-ಮೂಡುಬಿದಿರೆಯ ಸಂಚಾಲಕ ಎಂ.ಶಾಂತರಾಮ ಕುಡ್ವ ವಿಶೇಷ ಅಭ್ಯಾಗತರಾಗಿ ಹಾಗೂ ಅರ್ಥಧಾರಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 6 ಮಂದಿ ಕಲಾವಿದರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಗವತ ಬಲಿಪ ಶಿವಶಂಕರ್ ಭಟ್, ಯಕ್ಷಸಂಗಮದ ಅಧ್ಯಕ್ಷ ಅಶೋಕ ಮಲ್ಯ, ಸದಸ್ಯ ಅರುಣ್ ಉಪಸ್ಥಿತರಿದ್ದರು.







