ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಿರವಾಸೆ-ಸುಗುಡುವಾನಿ ಗ್ರಾಮಸ್ಥರಿಂದ ಧರಣಿ

ಚಿಕ್ಕಮಗಳೂರು, ಎ.19: ಕಸ್ತೂರಿ ರಂಗನ್ ವರದಿಯಲ್ಲಿ ಜನ ವಸತಿ-ಕೃಷಿ-ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಕೈ ಬಿಡುವಂತೆ ಆಗ್ರಹಿಸಿ ಸಿರವಾಸೆ ಗ್ರಾಪಂ ವ್ಯಾಪ್ತಿಯ ಸಿರವಾಸೆ-ಸುಗುಡುವಾನಿ ಗ್ರಾಮಸ್ಥರು ನಗರದ ಆಜಾದ್ ಪಾರ್ಕ್‌ನಲ್ಲಿ ಬುಧವಾರ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಾಗರ ಹೋಬಳಿ ಕಸಾಪ ಅಧ್ಯಕ್ಷ ರವಿ ಕೆಳವಾಸೆ ಮಾತನಾಡಿ, ಹಸಿರು ಪೀಠದಲ್ಲಿ ಕಲಂ 4ರ ಸೂಕ್ಷ್ಮ ಪ್ರದೇಶಗಳೆಂದು ಕಾಣಿಸಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ 5 ತಾಲ್ಲೂಕುಗಳ 147 ಗ್ರಾಮಗಳು ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರುತ್ತವೆ. ಚಿಕ್ಕಮಗಳೂರು ತಾಲ್ಲೂಕಿನ 27 ಗ್ರಾಮಗಳು, ಕೊಪ್ಪ ತಾಲ್ಲೂಕಿನ 32, ಮೂಡಿಗೆರೆ ತಾಲ್ಲೂಕಿನ 27, ಎನ್.ಆರ್.ಪುರ ತಾಲ್ಲೂಕಿನ 35 ಹಾಗೂ ಶೃಂಗೇರಿ ತಾಲ್ಲೂಕಿನ 26 ಗ್ರಾಮಗಳು ವರದಿಯಲ್ಲಿ ಸೇರಿವೆ. ಸಿರವಾಸೆ, ಸುಗುಡುವಾನಿ, ಜಾಗರ, ಬೊಗಸೆ, ಬಾಸಪುರ, ಕಡವತಿ, ಬಿದರೆ ಇತ್ಯಾದಿ ಗ್ರಾಮಗಳು ಒಳಪಡುತ್ತಿವೆ ಎಂದು ಹೇಳಿದರು.
ಆದರೆ ಗ್ರಾಮಗಳಲ್ಲಿ ತಲತಲಾಂತರಗಳಿಂದ ವಾಸಿಸುತ್ತಿರುವ ಇಲ್ಲಿನ ಜನರು ಪರಿಸರ ಸ್ನೇಹಿಯಾಗಿ ಕೃಷಿ ಚಟುವಟಿಕೆ ನಡೆಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕಸ್ತೂರಿ ರಂಗನ್ ಅವೈಜ್ಞಾನಿಕ ಸಮೀಕ್ಷೆ ನಡೆಸಿ ಪಶ್ಚಿಮ ಘಟ್ಟ ಹಾದು ಹೋಗಿರುವ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿದ್ದಾರೆ. ಆದರೆ ಈ ವ್ಯಾಪ್ತಿಗಳಲ್ಲಿರುವ ಜನ ವಸತಿ, ಕೃಷಿ ಪ್ರದೇಶವನ್ನು ಅವರು ಗಣನೆ ತೆಗೆದುಕೊಂಡಿರುವುದಿಲ್ಲ ಎಂದು ತಿಳಿಸಿದರು.
ನೂರಾರು ವರ್ಷಗಳಿಂದ ದಟ್ಟ ಮಲೆನಾಡು ಪ್ರದೇಶಗಳೊಗೆ ವಾಸಿಸುತ್ತಿರುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೆಳೆಗಾರರು, ಪರಿಸರ ಸ್ನೇಹಿಯಾಗಿ ಬದುಕು ನಡೆಸುತ್ತಿದ್ದು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಈ ಪ್ರದೇಶ ವಾಸಿಸುತ್ತಿರುವ ಜನರ ಬದುಕು ಸಂಪೂರ್ಣವಾಗಿ ನಿರ್ನಾಮವಾಗಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಾಗ, ಜನ ವಸತಿ, ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪರಿಸರ ಸೂಕ್ಮ ಪ್ರದೇಶಗಳ ವರದಿಯಿಂದ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಸಿರವಾಸೆ ಗ್ರಾಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಹೂವಮ್ಮ, ಜಿಪಂ ಸದಸ್ಯೆ ಕವಿತಾ ಲಿಂಗರಾಜು ಮುಖಂಡರಾದ ಜೇಸಿಂತ್ ಅನಿಲ್ ಕುಮಾರ್, ಜಾರ್ಜ್ ಆಸ್ಟಿನ್, ಪ್ರೇಮಾಕ್ಷಿ ಅಮೀನ್, ಜೆ.ಸಿ.ಲಕ್ಷ್ಮಣ್, ವಿಶ್ವನಾಥ್, ಕೆ.ಜಿ.ಪ್ರಕಾಶ್, ಪ್ರೇಂಕುಮಾರ್, ಮಲ್ಲಿಕಾ ಕುಳ್ಳನ್, ವಾಸು ಪೂಜಾರಿ ಮತ್ತಿತರರಿದ್ದರು.







