ಸಾಗರ ಸಮೀಪ ಭೀಕರ ರಸ್ತೆ ಅಪಘಾತ: ಐವರು ಮೃತ್ಯು?

ಸಾಗರ, ಎ.19: ಇಲ್ಲಿಗೆ ಸಮೀಪದ ಜೋಗಿನಗದ್ದೆ-ಮಂಚಾಲೆ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಆಲ್ಟೋ ಕಾರು ಮತ್ತು ಖಾಸಗಿ ಬಸ್ ಢಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದ ಮೋಹನ್ ಮತ್ತು ಕುಟುಂಬದವರು ಕೋಣಂದೂರಿನಲ್ಲಿ ಮದುವೆ ಕಾರ್ಯ ಮುಗಿಸಿ ವಾಪಾಸ್ ಊರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಜೋಗಿನಗದ್ದೆ-ಮಂಚಾಲೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ. ಎದುರಿನಿಂದ ಬರುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ನಡಹಳ್ಳಿ ಗ್ರಾಮದ ವಾಸಿ ಮೋಹನ್ (35) ಶೃತಿ (25), ನೀಲಕಂಠಪ್ಪ (65), ಕೆರಿಯಮ್ಮ (60) ಹಾಗೂ ಚಾಲಕ ಕೃಷ್ಣಮೂರ್ತಿ (45) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮೋಹನ್ ತಮ್ಮ ಪತ್ನಿ ಶೃತಿ ಅವರ ಸಂಬಂಧಿಕರ ಮದುವೆಗೆ ಬುಧವಾರ ಬೆಳಿಗ್ಗೆ ತಂದೆತಾಯಿ ಹಾಗೂ ಸ್ನೇಹಿತ ಕೃಷ್ಣಮೂರ್ತಿ ಜೊತೆ ಆಲ್ಟೋ ಎಸ್ಟಿಲೋ ಕಾರಿನಲ್ಲಿ ಕೋಣಂದೂರು ಸಮೀಪದ ಗ್ರಾಮವೊಂದಕ್ಕೆ ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಾಸ್ ಸಂಜೆ ತಮ್ಮ ಊರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಸುಮಾರು 100 ಅಡಿ ದೂರ ತಳ್ಳಿಕೊಂಡು ಹೋಗಿದೆ. ಅಪಘಾತದ ವೇಗಕ್ಕೆ ಕಾರು ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಬಸ್‌ನ ಗಾಜು ಸಿಡಿದು ಸಣ್ಣಪುಟ್ಟ ಗಾಯವಾಗಿದೆ. ಬೈಕ್ ಸವಾರ ಹಾಗೂ ಬಸ್ ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







