ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ: 40 ಮೆಟ್ರಿಕ್ ಟನ್ ಕಲ್ಲು ಸಹಿತ 2 ಟಿಪ್ಪರ್ ವಶ
ಉಡುಪಿ, ಎ.19: ಕೊಲ್ಲೂರು ಹಾಗೂ ಕಾರ್ಕಳದ ಐದು ಕಡೆಗಳಲ್ಲಿ ಅಕ್ರಮ ವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಕಲ್ಲು ಸಹಿತ ಎರಡು ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದೆ.
ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ಗ್ರಾಮದ ಗೋತೆ ಪರಿಸರದಲ್ಲಿ ಸುಬ್ರಾಯ್ ಭಟ್ ಎಂಬವರು ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣೆಗಾರಿಕೆಗೆ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಹೇಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಜಾಗದಲ್ಲಿ ಅನಧಿಕೃತವಾಗಿ 1,800 ಮೆಟ್ರಿಕ್ ಟನ್ ಕಲ್ಲುಗಣಿಗಾರಿಕೆ ನಡೆಸಿರು ವುದು ಕಂಡುಬಂದಿದೆ. ನಂತರ ಇದೇ ತಂಡ ಹೊಸುರು ಗ್ರಾಮದ ದೇವಲ್ಕುಂದ ಪರಿಸರದಲ್ಲಿ ಅಶೋಕ ಶೆಟ್ಟಿ ಎಂಬವರು ನಡೆಸುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿ ಪರಿಶೀಲಿಸಿದಾಗ ಇಲ್ಲಿ ಅನಧಿಕೃತವಾಗಿ 300 ಮೆಟ್ರಿಕ್ ಟನ್ ಕಲ್ಲುಗಣಿಗಾರಿಕೆ ನಡೆಸಿರುವುದು ಕಂಡು ಬಂದಿದೆ.
ಸ್ಥಳದಲ್ಲಿ ಪತ್ತೆಯಾದ ಒಟ್ಟು 40 ಮೆಟ್ರಿಕ್ ಟನ್ ಕಲ್ಲು ಸಹಿತ ಎರಡು ಟಿಪ್ಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 36 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಳಿಕ ತಂಡ ಹೊಸುರು ಗ್ರಾಮದ ಸಮಾಜಿಕೊಡ್ಲು ಪರಿಸರದಲ್ಲಿ ಅಮೃತ್ ಶೆಟ್ಟಿ ಎಂಬವರು ನಡೆಸುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ದಾಳಿ ನಡೆಸಿ ಪರಿಶೀಲಿಸಿದಾಗ ಈ ಜಾಗದಲ್ಲಿ ಅನಧಿಕೃತವಾಗಿ 2,000 ಮೆಟ್ರಿಕ್ ಟನ್ ಕಲ್ಲು ಗಣಿಗಾರಿಕೆ ನಡೆಸಿರುವುದು ಪತ್ತೆ ಹಚ್ಚಿದೆ. ಅದೇ ರೀತಿ ತಂಡ ಹೊಸುರು ಗ್ರಾಮದ ಕುತ್ತಟಮಕ್ಕಿ ಎಂಬಲ್ಲಿ ವಿಶ್ವನಾಥ ಶೆಟ್ಟಿ ನಡೆಸುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿ ಪರಿಶೀಲಿಸಿದಾಗ ಇಲ್ಲಿ ಅನಧಿಕೃತವಾಗಿ 2,000 ಮೆಟ್ರಿಕ್ ಟನ್ ಗಣಿಗಾರಿಕೆ ನಡೆಸಿರುವುದು ತಿಳಿದುಬಂದಿದೆ. ಈ ನಾಲ್ಕು ಅಕ್ರಮ ಗಣಿ ಗಾರಿಕೆ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ನಿಟ್ಟೆ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಮೂಡಬಿದ್ರೆಯ ಮುನೀರ್, ಬೋಳದ ಜಯರಾಮ ಸಾಲಿಯಾನ್, ಸೂರ್ಯಕಾಂತ ಶೆಟ್ಟಿ, ನಿಟ್ಟೆಯ ಸದಾಶಿವ ಸಾಲಿಯಾನ್, ಚಂದ್ರಕಾಂತ ಪೂಜಾರಿ ಎಂಬವರು ಅಕ್ರಮವಾಗಿ ನಡೆಸುತ್ತಿದ್ದ ಕಲ್ಲು ಗಣಿಗಾರಿಕೆಗೆ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಡಾ.ಎಚ್.ಎಸ್.ಮಹದೇಶ್ವರ ಎ.18ರಂದು ಸಂಜೆ ವೇಳೆ ದಾಳಿ ನಡೆಸಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







