ಅಸಹಾಯಕ ಮಹಿಳೆಯರಿಬ್ಬರು "ವಿಶ್ವಾಸದ ಮನೆ"ಗೆ

ಉಡುಪಿ, ಎ.19: ಬೀದಿ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಇಬ್ಬರು ಹಿರಿಯ ಮಹಿಳೆಯರಿಗೆ ಚಿಕಿತ್ಸೆ ಕೊಡಿಸಿ, ಇದೀಗ ಅವರನ್ನು ಶಂಕರಪುರದ "ವಿಶ್ವಾಸದ ಮನೆ"ಗೆ ದಾಖಲಿಸಲಾಗಿದೆ.
ಉಡುಪಿ ಕೃಷ್ಣಮಠದ ರಥಬೀದಿ ಪರಿಸರದಲ್ಲಿ ಸುಮಾರು 60 ವರ್ಷ ವಯಸ್ಸಿನ ಜಾನಕಿ ಎಂಬವರು ಮಾನಸಿಕ ಖಿನ್ನತೆಯಿಂದಾಗಿ 30 ವರ್ಷಗಳಿಂದ ಬೀದಿಯಲ್ಲಿ ತಿರುಗಾಡುತ್ತಿದ್ದು, ರಾತ್ರಿ ವೇಳೆ ರಸ್ತೆ ಅಂಚಿನ ಚರಂಡಿಗೆ ಬಿದ್ದು ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಅವರನ್ನು ಸಮಾಜಸೇವಕ ನಿತ್ಯಾನಂದ ಒಳ ಕಾಡು ಸೆ.12ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅದೇ ರೀತಿ ಅಮ್ಮುಂಜೆಯಲ್ಲಿ ಕಾಡಿನ ಮಧ್ಯೆ ಹಾಳು ಬಿದ್ದ ಮನೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ವಾಸವಾಗಿದ್ದ ಸುಂದರಿ ಶೆಡ್ತಿ(70) ಎಂಬವರ ದಯನೀಯ ಸ್ಥಿತಿ ಕಂಡ ನಿತ್ಯಾನಂದ ಒಳಕಾಡು, ಸ್ಥಳಿಯರ ನೆರವು ಪಡೆದು ಫೆ.24ರಂದು ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ದೀರ್ಘ ಸಮಯದ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾದ ಜಾನಕಿ ಮತ್ತು ಸುಂದರಿ ಶೆಡ್ತಿ ಅವರನ್ನು ಯಾರೂ ವಾರಸುದಾರರಿಲ್ಲದ ಕಾರಣ ಮುಂದಿನ ಜೀವನ ಭದ್ರತೆಗಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ ಶಂಕರಪುರದ ವಿಶ್ವಾಸದ ಮನೆಯ ಅನಾಥಶ್ರಮಕ್ಕೆ ಸೇರಿಸಲಾಯಿತು. ಈ ಸಂದರ್ಭ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಆಶ್ರಮದ ಉಸ್ತುವಾರಿಗಳಾದ ಮ್ಯಾಥ್ಯು, ಸುನೀಲ್ ಜೋಶ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.





