ಬಿಎಸ್‌ವೈ ವಿರುದ್ಧ ‘ಈಶ್ವರಪ್ಪ ಹೊಸ ಪಟ್ಟು’ : ‘ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್’ ಸ್ಥಾಪನೆ

ಬೆಂಗಳೂರು, ಎ. 19: ಉಪ ಚುನಾವಣೆ ಸೋಲಿನ ಬಳಿಕವೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಕಾರ್ಯಚಟುವಟಿಕೆ ಮತ್ತಷ್ಟು ಚುರುಕುಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ಬುಧವಾರ ಇಲ್ಲಿನ ಶಾಸಕರ ಭವನದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪೂರ್ವಭಾವಿ ಸಭೆ ನಡೆಸಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾದರಿಯಲ್ಲೆ ರಾಜ್ಯದಲ್ಲಿ ‘ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್’ ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ನೇತೃತ್ವದಲ್ಲಿ ರಾಜ್ಯದಲ್ಲಿ ಎರಡು ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ನಾಳೆ (ಎ.20) ನಗರದ ಖಾಸಗಿ ಹೊಟೇಲ್‌ನಲ್ಲಿ ಬ್ರಿಗೇಡ್ ಮುಖ್ಯಸ್ಥರೂ ಆಗಿರುವ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.
ಪದಾಧಿಕಾರಿಗಳ ಪಟ್ಟಿ ಬದಲಾವಣೆ, ಪಕ್ಷದ ಮುಖಂಡರ ಅಮಾನತ್ತು ಆದೇಶ ಹಿಂಪಡೆಯುವುದು, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಇನ್ನಿತರ ವಿಚಾರಗಳಿಗೆ ಬಿಎಸ್‌ವೈ ಸ್ಪಂದಿಸದ ಹಿನ್ನೆಲೆಯಲ್ಲಿ ಈಶ್ವರಪ್ಪ, ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ವಿಸ್ತರಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೂರ್ತಿ, ಗೌರವಾಧ್ಯಕ್ಷ ಮುಕುಡಪ್ಪ, ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ, ಮುಖಂಡರಾದ ಪುಟ್ಟಸ್ವಾಮಿ, ಉಮೇಶ್ ಸೇರಿ ಪದಾಧಿಕಾರಿಗಳು ಹಾಜರಿದ್ದರು.







