ಎಚ್-1ಬಿ ವೀಸಾ ಕಾರ್ಯಕ್ರಮ ಮರುಪರಿಶೀಲನೆ : ಸರಕಾರಿ ಆದೇಶಕ್ಕೆ ಟ್ರಂಪ್ ಸಹಿ

ವಾಶಿಂಗ್ಟನ್, ಎ. 19: ಗರಿಷ್ಠ ಕೌಶಲ ಹೊಂದಿರುವ ವಿದೇಶೀಯರಿಗಾಗಿರುವ ಎಚ್-1ಬಿ ವೀಸಾ ಯೋಜನೆಯನ್ನು ಮರುಪರಿಶೀಲಿಸಿ ಅದರಲ್ಲಿ ಮಾರ್ಪಾಡುಗಳನ್ನು ತರುವಂತೆ ಫೆಡರಲ್ ಸಂಸ್ಥೆಗಳಿಗೆ ಸೂಚನೆ ನೀಡುವ ಸರಕಾರಿ ಆದೇಶವೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಹಿ ಹಾಕಿದ್ದಾರೆ.
‘‘ಅತ್ಯಂತ ಪರಿಣತ ಹಾಗೂ ಅತ್ಯಂತ ಹೆಚ್ಚು ವೇತನ ಪಡೆಯುವವರಿಗೆ’’ ಆದ್ಯತೆ ಲಭಿಸುವಂತೆ ವೀಸಾ ಕಾರ್ಯಕ್ರಮದಲ್ಲಿ ಬದಲಾವಣೆಯಾಗಬೇಕು ಎಂದು ಆದೇಶ ಹೇಳುತ್ತದೆ.
ಅತ್ಯಂತ ಕೌಶಲಭರಿತ ವಿದೇಶೀಯರಿಗಾಗಿ ಅಮೆರಿಕ ಪ್ರತಿ ವರ್ಷ 85,000 ಎಚ್-1ಬಿ ವೀಸಾಗಳನ್ನು ನೀಡುತ್ತದೆ. ಈ ಪೈಕಿ 65,000 ಮಂದಿಯನ್ನು ವಿದೇಶಗಳಿಂದ ತರಿಸಲಾಗುತ್ತದೆ ಹಾಗೂ ಅಮೆರಿಕದ ಕಾಲೇಜುಗಳಲ್ಲಿ ಕಲಿತವರಿಗೆ 20,000 ವೀಸಾಗಳನ್ನು ನೀಡಲಾಗುತ್ತದೆ. ಈ ವೀಸಾಗಳಿಗೆ ಭಾರೀ ಬೇಡಿಕೆಯಿರುವುದರಿಂದ ವೀಸಾ ವಿಜೇತರನ್ನು ಲಾಟರಿ ಮೂಲಕ ಆರಿಸಲಾಗುತ್ತದೆ.
‘‘ಈಗ ಎಚ್-1ಬಿ ವೀಸಾಗಳನ್ನು ಸಂಪೂರ್ಣವಾಗಿ ಲಾಟರಿ ಮೂಲಕ ಆರಿಸಲಾಗುತ್ತದೆ. ಅದು ತಪ್ಪು’’ ಎಂದು ವಿಸ್‌ಕಾನ್ಸಿನ್ ರಾಜ್ಯದ ಕಾರ್ಖಾನೆಯೊಂದರಲ್ಲಿ ಆದೇಶಕ್ಕೆ ಸಹಿ ಹಾಕಿದ ಟ್ರಂಪ್ ಹೇಳಿದರು.
‘‘ಬದಲಿಗೆ ಈ ವೀಸಾಗಳನ್ನು ಅತ್ಯಂತ ಪರಿಣತ ಹಾಗೂ ಅತ್ಯಧಿಕ ವೇತನ ಪಡೆಯುವ ಅರ್ಜಿದಾರರಿಗೆ ನೀಡಬೇಕು ಹಾಗೂ ಅಮೆರಿಕನ್ನರ ಸ್ಥಾನಗಳಲ್ಲಿ ಇತರರನ್ನು ನೇಮಿಸಲು ಈ ವೀಸಾಗಳನ್ನು ಬಳಸಬಾರದು’’ ಎಂದು ಅವರು ನುಡಿದರು.
ಭಾರತೀಯ ನೌಕರರನ್ನು ಕಾಡುತ್ತಿರುವ ಅಸ್ಥಿರತೆ
ಎಚ್-1ಬಿ ವೀಸಾ ಕಾರ್ಯಕ್ರಮದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಭಾರತೀಯ ಐಟಿ ಕ್ಷೇತ್ರದ ನೌಕರರ ಮೇಲೆ ತೂಗುಗತ್ತಿಯಗಿ ಪರಿಣಮಿಸಿದೆ. ಈ ನಿರ್ಬಂಧಗಳಿಂದಾಗಿ ತಮ್ಮ ನೌಕರರನ್ನು ಅಮೆರಿಕಕ್ಕೆ ಕಳುಹಿಸಲು ಭಾರತೀಯ ಐಟಿ ಕಂಪೆನಿಗಳಿಗೆ ಕಷ್ಟವಾಗುತ್ತದೆ. ಯಾಕೆಂದರೆ ಅದು ಹೆಚ್ಚಿನ ವೆಚ್ಚದಾಯಕ ಕೆಲಸವಾಗುತ್ತದೆ.
ಅದೇ ವೇಳೆ, ಡಾಲರ್‌ಎದುರು ರೂಪಾಯಿ ವೌಲ್ಯ ಏರುತ್ತಿರುವುದರಿಂದಲೂ ಭಾರತೀಯ ಐಟಿ ಕಂಪೆನಿಗಳು ನಷ್ಟ ಅನುಭವಿಸುತ್ತಿವೆ ಎನ್ನಲಾಗಿದೆ. ಇವುಗಳೆಲ್ಲದರ ಪರಿಣಾಮವಾಗಿ ಭಾರತೀಯ ಐಟಿ ಕಂಪೆನಿಗಳು ಬದುಕುಳಿಯುವುದಕ್ಕಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಕ್ರಮಕ್ಕೆ ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.







