ಹೊಸ ಚಿಂತನೆಗೆ ರಜಾ ಶಿಬಿರಗಳು ಪೂರಕ: ಡಾ.ಶಾಂತಾರಾಮ್

ಮಣಿಪಾಲ, ಎ.19: ನಿಜವಾದ ಅರ್ಥದಲ್ಲಿ ವಿದ್ಯಾರ್ಜನೆ ಎಂದರೆ ಶಾಲೆ, ಕಾಲೇಜಿನಲ್ಲಿ ಅಧ್ಯಾಪಕರು ಭೋದಿಸಿದ ವಿಷಯಗಳನ್ನು ಗ್ರಹಿಸಿ ವರ್ಷದ ಕೊನೆಯಲ್ಲಿ ಪರೀಕ್ಷೆಯಲ್ಲಿ ಉತ್ತರ ಬರೆದು ತೇರ್ಗಡೆ ಹೊಂದುವುದಲ್ಲ. ಗುರುಮುಖೇನ ಕಲಿಯುವುದರ ಜೊತೆಗೆ ಜ್ಞಾನವನ್ನು ತಮ್ಮ ಸ್ವಂತ ಶಕ್ತಿಯಿಂದ, ಸಹಪಾಠಿಗಳಿಂದ, ಸಮಾಜದಿಂದ, ಪ್ರಕೃತಿಯಿಂದ ಸಂಪಾದಿಸಬೇಕು. ಈ ರೀತಿ ಹೊಸ ಚಿಂತನೆಗೆ ರಜಾ ಶಿಬಿರಗಳು ಪೂರಕವಾಗುತ್ತವೆ ಎಂದು ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಶಾಂತಾರಾಮ್ ಹೇಳಿದ್ದಾರೆ.
ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಅಕಾಡಮಿ ಆಫ್ ಜನರಲ್ ಎಜುಕೇಶನ್ ಹೈಸ್ಕೂಲು ವಿದ್ಯಾರ್ಥಿಗಳಿಗೆ ಬಿವಿಟಿಯಲ್ಲಿ ಆಯೋಜಿಸಿದ್ದ ಆರು ದಿನಗಳ ಬೇಸಿಗೆ ರಜಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸ್ಪರ್ಧೆಗಳಲ್ಲಿ ಉತ್ತಮ ನಿರ್ವಹಣೆಗೈದವರಿಗೆ ಮತ್ತು ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಬಿವಿಟಿ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ ಮಾತನಾಡಿ, ವಿದ್ಯಾರ್ಥಿಗಳಿಗೆ ರಜಾ ಶಿಬಿರದಲ್ಲಿ ಪಡೆದ ಅನುಭವ ಮುಂದಿನ ಜೀವನದ ಯಶಸ್ಸಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳು ಶಿಬಿರದ ತಮ್ಮ ವೈಯುಕ್ತಿಕ ಅನುಭವಗಳನ್ನು ಹಂಚಿಕೊಂಡರು.
ಬಿವಿಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಕಟ್ಗೇರಿ, ಟಿ.ಎ.ಪೈ ಗ್ರಾಮೀಣ ತರಬೇತಿ ಸಂಸ್ಥೆ ನಿರ್ದೇಶಕ ಕೃಷ್ಣಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿ ಆಡಳಿತಾಧಿಕಾರಿ ಐ.ಜಿ.ಕಿಣಿ ವಂದಿಸಿದರು.
ಉಡುಪಿ, ಶಿವಮೊಗ್ಗ ಜಿಲ್ಲೆಗಳಿಂದ ಬಂದ 15 ಶಾಲೆಗಳ 68 ವಿದ್ಯಾರ್ಥಿಗಳು ರಜಾ ಶಿಬಿರದಲ್ಲಿ ಭಾಗವಹಿಸಿದ್ದರು.







