ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಪಾಸ್ಕಲ್ ಖುಲಾಸೆ
ಬೆಂಗಳೂರು, ಎ.19: ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರಿನ ಫ್ರೆಂಚ್ ರಾಯಭಾರಿ ಕಚೇರಿ ಅಧಿಕಾರಿ ಪಾಸ್ಕಲ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ಸೆಷನ್ಸ್ ನ್ಯಾಯಾಲಯ ಪಾಸ್ಕಲ್‌ರನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.
ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆ ಮಾಡಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಪಾಸ್ಕಲ್ ವಿರುದ್ಧ 3 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ದಾಖಲಾಗಿತ್ತು. ಪಾಸ್ಕಲ್ ಪತ್ನಿಯೇ ಈ ಬಗ್ಗೆ 2012ರಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪಾಸ್ಕಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಆದರೆ ದೂರಿನಲ್ಲಿರುವಂತೆ ಮಗಳ ಮೇಲೆ ಅತ್ಯಾಚಾರ ನಡೆಸಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕೋರ್ಟ್ ಪಾಸ್ಕಲ್‌ನನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ. 2012ರಲ್ಲಿ ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಪಾಸ್ಕಲ್‌ನ ಪತ್ನಿ ಉದ್ದೇಶಪೂರ್ವಕವಾಗಿಯೇ ಇಂತಹ ದೂರು ನೀಡಿದ್ದರು ಎಂಬ ಮಾಹಿತಿಯೂ ಬೆಳಕಿಗೆ ಬಂದಿತ್ತು. ಈಗ ಐದು ವರ್ಷಗಳ ಬಳಿಕ ಪ್ರಕರಣ ಇತ್ಯರ್ಥವಾಗಿದೆ.





