ರಂಗಭೂಮಿಗೆ ಸಾಮಾಜಿಕ ಸಮಸ್ಯೆ ಪರಿಹರಿಸುವ ಬದ್ಧತೆ ಅಗತ್ಯ: ನಿರ್ಮಲಾ ಮಠಪತಿ

ಉಡುಪಿ, ಎ.19: ರಂಗಭೂಮಿಗೆ ಕೇವಲ ಸಾಂಸ್ಕೃತಿಕ ಮಾತ್ರವಲ್ಲ ಸಾಮಾಜಿಕ ಜವಾಬ್ದಾರಿ ಕೂಡ ಇದೆ. ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ಪರಿಣಾಮ ಕಾರಿಯಾಗಿ ತಿಳಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಮಾಜಿಕ ಬದ್ಧತೆ ರಂಗ ಭೂಮಿಗೆ ಇದೆ ಎಂದು ಮೈಸೂರು ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದ್ದಾರೆ.
ಯಕ್ಷಗುರು ದಿವಂಗತ ಯು.ದುಗ್ಗಪ್ಪರವರಿಗೆ ಶ್ರದ್ಧಾಂಜಲಿ ಅರ್ಪಿಸಲು ಸುಮನಸಾ ಕೊಡವೂರು ವತಿಯಿಂದ ರಂಗಾಯಣ ಮೈಸೂರು ಇದರ ‘ರಂಗಾಪಯಣ’ ಸಹಕಾರದೊಂದಿಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ನಾಟಕೋತ್ಸವ ‘ಕಲಾ ನಮನ’ದಲ್ಲಿ ಬುಧವಾರ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ನಾಟಕ ಎಂಬುದು ಪ್ರತಿದಿನ ಹುಟ್ಟುತ್ತದೆ ಮತ್ತು ಪ್ರತಿದಿನ ಸಾಯುತ್ತದೆ. ಓರ್ವ ಕಲಾವಿದ ಒಂದು ಪ್ರದರ್ಶನದಲ್ಲಿ ಉತ್ತಮ ನಟನೆ ಮಾಡಿ ಇನ್ನೊಂದ ರಲ್ಲಿ ಕಳಪೆ ಪ್ರದರ್ಶನ ಮಾಡಿದರೆ ಆತ ಹೀರೋ ಆಗಿ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಕಲಾವಿದರಿಗೆ ಪ್ರತಿ ನಾಟಕ ಪ್ರದರ್ಶನವು ಸವಾಲಾಗಿರುತ್ತದೆ. ಈ ನಿಟ್ಟಿನಲ್ಲಿ ಕಲಾವಿದರು ಪ್ರೇಕ್ಷಕರ ಮುಂದೆ ಬಂದು ಟೀಕೆ ಹಾಗೂ ಪ್ರಶಂಸೆಗಳನ್ನು ಸ್ವೀಕರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಹೊಸ ನಟರು, ನಿರ್ದೇಶಕರು, ಸಂಗೀತ ಸಂಯೋಜಕರು, ನಾಟಕಕಾರರನ್ನು ಸೃಷ್ಠಿ ಮಾಡಬೇಕಾಗಿದ್ದು, ಹೊಸ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವ ಬಹುದೊಡ್ಡ ಜವಾಬ್ದಾರಿ ರಂಗಾಯಣದ ಮೇಲಿದೆ. ರಂಗಾಯಣ ಹೊರತು ಪಡಿಸಿ ರಂಗಭೂಮಿ ಕುರಿತು ನಡೆಸುವ ಅಧ್ಯಯನ ಅಪೂರ್ಣವಾಗಿರುತ್ತದೆ ಎಂದರು.
ಹಿರಿಯ ಯಕ್ಷಗಾನ ಗುರು ಜಯಂತ್ ಕುಮಾರ್ ತೋನ್ಸೆ ನುಡಿನಮನ ಸಲ್ಲಿಸಿದರು. ಉಡುಪಿ ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಎಂ.ಎಸ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಕರ್ಕೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ರಂಗಾಯಣ ಯುವ ಸಂಚಾರಿ ರಂಗ ಘಟಕದಿಂದ ‘ಸಂಗ್ಯಾ-ಬಾಳ್ಯಾ’ ಕನ್ನಡ ನಾಟಕ ಪ್ರದರ್ಶನ ಗೊಂಡಿತು.







