ಖತೀಬರ ಹೊಣೆಗಾರಿಕೆ ಅತ್ಯಂತ ಮಹತ್ವದ್ದು: ಡಾ.ತಹಾಮತೀನ್

ಉಡುಪಿ, ಎ.19: ಸಮುದಾಯದ ಮಾರ್ಗದರ್ಶನದ ಜವಾಬ್ದಾರಿಯನ್ನು ಹೊತ್ತಿರುವ ಮಸೀದಿಯ ಖತೀಬರ ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿದೆ. ಇಮಾಮ್, ಖತೀಬರು ಸಮುದಾಯವನ್ನು ಒಳಿತಿನೆಡೆಗೆ ಕೊಂಡೊಯ್ಯುವ ಸರ್ವ ಸಾಧ್ಯ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಅದಕ್ಕಾಗಿ ಅಧ್ಯಯನವನ್ನು ತನ್ನ ನಿತ್ಯ ಜೀವನದ ಭಾಗವನ್ನಾಗಿಸಬೇಕು ಮತ್ತು ಇತರ ವಿದ್ಯೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ಅಕ್ಯೂರ ಆಸ್ಪತ್ರೆಯ ನಿರ್ದೇಶಕ ಹಾಗೂ ಇಸ್ಲಾಮಿ ವಿದ್ವಾಂಸ ಡಾ.ತಹಾಮತೀನ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ್ಟದ ವತಿಯಿಂದ ಇತ್ತೀಚೆಗೆ ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆದ ಖತೀಬರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಮಸೀದಿಗಳು ಸಮುದಾಯ ಅಭಿವೃದ್ಧಿಯ ಕೇಂದ್ರವಾಗಿ ಮಾರ್ಪಡಬೇಕು. ಸಮುದಾಯದ ಎಲ್ಲ ಅಂಕಿಅಂಶಗಳು ಅಲ್ಲಿ ಲಭ್ಯವಿರಬೇಕು ಮತ್ತು ಮಸೀದಿ ಗಳಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಚಿಂತನೆಗಳು ನಡೆಯ ಬೇಕು. ಇದರ ನಾಯಕತ್ವವನ್ನು ಮಸೀದಿಯ ಇಮಾಮರು, ಖತೀಬರು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾವೇಶವನ್ನು ಉದ್ಘಾಟಿಸಿದ ಹೊನ್ನಾಳ ಮುಹಮ್ಮದೀಯ ಮಸೀದಿಯ ಖತೀಬ್ ಹಾಮೀದ್ಸಲಫಿ ಮಾತನಾಡಿ, ಅಂಶಿಕ ಭಿನ್ನಾಭಿಪ್ರಾಯಗಳನ್ನು ಬದಿ ಗಿಟ್ಟು ಸಾಮಾಜಿಕ ಮತ್ತು ಸಮುದಾಯದ ಅಭಿವೃದ್ಧಿಯ ಕೆಲಸಗಳಲ್ಲಿ ಎಲ್ಲರು ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಅಲ್ಲದೆ ಪ್ರಸಕ್ತ ಸನ್ನಿವೇಶದ ಸೂಕ್ಷ್ಮತೆ ಯನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.
ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ನಾವುಂದ, ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಇಸ್ಲಾಮಿಕ್ ದಾವಾ ಸೆಂಟರ್‌ನ ಅತೀಫ್ ಹುಸೇನ್, ಸುನ್ನಿ ಸಂಯುಕ್ತ ಜಮಾಅತ್‌ನ ಉಪಾಧ್ಯಕ್ಷ ಖಾಸೀಂ ಬಾರಕೂರು ಮಾತನಾಡಿದರು.
ಧ್ಯಕ್ಷತೆಯನ್ನು ಮೌಲನಾ ಇಸ್ಮಾಯಿಲ್ ನದ್ವಿ ವಹಿಸಿದ್ದರು. ಮೌಲಾನಾ ಹಾಶೀಮ್ ಉಮರಿ ಕುರಾನ್ ಪಠಿಸಿದರು. ಮೌಲಾನ ರಿಝ್ವಿನ್ ಕಾರ್ಕಳ ವಂದಿಸಿದರು. ಯು.ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.







