‘ಕುಡಿಯುವ ನೀರಿನ ಸಮಸ್ಯೆಗೆ ಉಡುಪಿ ಜಿಲ್ಲಾಡಳಿತ ಕಾರಣ’
ಉಡುಪಿ, ಎ.19: ಉಡುಪಿ ನಗರದ ನೀರು ಪೂರೈಕೆಯ ಧಾರಣಾ ಶಕ್ತಿಯನ್ನು ತಿಳಿಯದೇ ಬೇಕಾಬಿಟ್ಟಿ ಬಹುಮಹಡಿ ಕಟ್ಟಡಗಳಿಗೆ ಪರವಾನಿಗೆ ನೀಡುತ್ತಿ ರುವುದು, ಅಸಮರ್ಪಕ ನೀರು ಸರಬರಾಜು ವ್ಯವಸ್ಥೆ, ನೀರು ಪೋಲಾಗುತ್ತಿರುವುದು ಉಡುಪಿ ನಗರದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಲು ಪ್ರಮುಖ ಕಾರಣವಾಗಿದೆ ಎಂದು ತುಳುನಾಡು ಒಕ್ಕೂಟದ ಅಧ್ಯಕ್ಷ ಐಕಳಬಾವ ಚಿತ್ತರಂಜನ್‌ದಾಸ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿಗೆಂದು ತೆರಿಗೆ ವಸೂಲಿ ಮಾಡಿದರೂ ಒಂದೇ ಒಂದು ಕೆರೆಯನ್ನು ಅಭಿವೃದ್ಧಿಗೊಳಿಸದಿರುವುದು, ನಗರ ತೀವ್ರವಾಗಿ ಬೆಳೆಯುತ್ತಿದ್ದರೂ 3ನೇ ಹಂತದ ನೀರು ಸರಬರಾಜು ಯೋಜನೆ ಯನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷ ವಹಿಸಿರುವುದು, ನಗರದ ದಕ್ಷಿಣ ದಿಕ್ಕಿನಲ್ಲಿ ಸಮುದ್ರ ಪಾಲಾಗುತ್ತಿರುವ ಹೊಳೆ ನೀರನ್ನು ಅಣೆಕಟ್ಟು ನಿರ್ಮಿಸಿ ಬಳಕೆ ಮಾಡುವ ಯೋಜನೆಗಳ ವಿಫಲತೆ, ಸ್ವರ್ಣ ನದಿಯಲ್ಲಿ ಹೂಳು, ಮರಳು ತುಂಬಿದರೂ ಯಾವುದೇ ಕಾಮಗಾರಿಯನ್ನು ಮುಂಚಿತವಾಗಿ ಕೈಗೊಳ್ಳದಿರು ವುದು ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಎಂದವರು ಹೇಳಿಕೆಯಲ್ಲಿ ದೂರಿದ್ದಾರೆ.
ಕರಾವಳಿ ಜಿಲ್ಲೆಗಳಿಗೆ ಈವರೆಗೆ ಯಾವುದೇ ನೀರಾವರಿ ಯೋಜನೆಗಳಿಲ್ಲ. ಜಿಲ್ಲಾಡಳಿತ, ನಗರಸಭೆ ಹಾಗೂ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ರಾಜಕಾರಣಿಗಳು ಜನರ ಮೂಲಭೂತ ಹಕ್ಕುಗಳಲ್ಲೊಂದಾದ ಶುದ್ಧ ಕುಡಿಯುವ ನೀರನ್ನು ಪೂರೈಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದವರು ಬೆಟ್ಟು ಮಾಡಿದರು. ಬೆಳೆಯುತ್ತಿರುವ ಉಡುಪಿ ನಗರದ ತೀವ್ರ ಜಲಕ್ಷಾಮ ನಿವಾರಣೆಗೆ ಇನ್ನಾದರೂ ತುರ್ತುಕ್ರಮ ಕೈಗೊಳ್ಳಬೇಕಾಗಿದೆ ಎಂದು ಚಿತ್ತರಂಜನ್‌ದಾಸ್ ಶೆಟ್ಟಿ ಸಂಬಂಧಪಟ್ಟವರನ್ನು ವಿನಂತಿಸಿದ್ದಾರೆ.





