ಅಡ್ಡಮತದಾನ ಮಾಡಲು ನಾನು ಹೇಳಿಲ್ಲ: ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೂ ಸಿದ್ಧ; ಕುಮಾರಸ್ವಾಮಿ

ನಾಗಮಂಗಲ, ಎ.19: ಇತ್ತೀಚೆಗೆ ನಾಗಮಂಗಲದಲ್ಲಿ ನಡೆದ ಸಮಾವೇಶದಲ್ಲಿ ಜೆಡಿಎಸ್ ನಿಂದ ಅಮಾನತಾದ ಶಾಸಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಶಾಸಕರು ನೀಡಿರುವ ಪಂಥಾಹ್ವಾನವನ್ನು ಸ್ವೀಕರಿಸಿದ್ದಾರೆ.
ತಾಲೂಕಿನ ಕದಬಹಳ್ಳಿ ದೇವರಮಾವಿನಕೆರೆ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಲು ತಾನು ಹೇಳಿರಲಿಲ್ಲ. ಈ ಬಗ್ಗೆ ಧರ್ಮಸ್ಥಳದಲ್ಲಿ ಆಣೆ ಮಾಡಲು ಸಿದ್ಧ ಎಂದರು.
"ನನ್ನ ಪಕ್ಷದಿಂದಲೇ ರಾಜ್ಯಸಭೆಗೆ ಅಭ್ಯರ್ಥಿಯನ್ನು ನಿಲ್ಲಿಸಿರುವಾಗ ಬೇರೆ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಲು ಸಾಧ್ಯವೆ? ಜಮೀರ್ ಅಹಮದ್ ಆರೋಪದಲ್ಲಿ ಎಷ್ಟು ಸತ್ಯವಿದೆ ಎಂಬುದು ಜನರಿಗೆ ಗೊತ್ತಿದೆ" ಎಂದು ಅವರು ಹೇಳಿದರು.
'ತನ್ನ ಕುಟುಂಬದವರಿಂದಲೇ ಕುಮಾರಸ್ವಾಮಿ ಬೀದಿಗೆ ಬರುತ್ತಾರೆಂಬ' ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜನ ಸೇವೆಗಾಗಿ ಬೀದಿಗಿಳಿದು ರಾಜಕಾರಣ ಮಾಡುತ್ತೇನೆ, ಅವರಂತೆ (ಬಾಲಕೃಷ್ಣ) ಏರ್‌ಕಂಡೀಷನರ್ ಕೊಠಡಿಯಲ್ಲಿ ಕುಳಿತು ರಾಜಕೀಯ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.'ಪಕ್ಷದಲ್ಲಿದ್ದಾಗ ತನ್ನನ್ನು ರಾಜಕೀಯವಾಗಿ ತುಳಿಯಲು ದೇವೇಗೌಡರು ನೂರು ಬಾರಿ ಪ್ರಯತ್ನ ಮಾಡಿದ್ದರು' ಎಂಬ ಚಲುವರಾಯಸ್ವಾಮಿ ಆರೋಪದಲ್ಲಿ ಸತ್ಯವಿಲ್ಲ. ತಮ್ಮ ಮೇಲಿನ ಜನರ ಆಕ್ರೋಶ ಕಡಿಮೆ ಮಾಡಿಕೊಳ್ಳಲು ಸುಳ್ಳು ಆರೋಪಗಳನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದರು.
ಬೇರೊಂದು ಪಕ್ಷ ಸೇರುವ ತವಕದಲ್ಲಿರುವ ನೀವು ನಮ್ಮ ಬಗ್ಗೆ ಮಾತನಾಡುವುದೇಕೆ ಎಂದು ಪ್ರಶ್ನಿಸಿದ ಅವರು, ತನ್ನ ವಿರುದ್ಧ ಮತ್ತಷ್ಟು ಆರೋಪ, ಟೀಕೆ ಮಾಡಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಡಿ. ನಿಮ್ಮೆಲ್ಲಾ ಆರೋಪಗಳಿಗೆ ನಾಗಮಂಗಲದ ಸಮಾವೇಶದಲ್ಲೇ ಉತ್ತರ ಕೊಡುತ್ತೇನೆ ಎಂದು ಎಚ್ಚರಿಸಿದರು.
ಜನಾಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ: ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಗ್ಗೆ ಗೊಂದಲಗಳಿರುವುದು ನಿಜ. ಮಾಜಿ ಶಾಸಕರಾದ ಶಿವರಾಮೇಗೌಡ, ಸುರೇಶ್‌ಗೌಡ ಹಾಗೂ ಲಕ್ಷ್ಮಿಅಶ್ವಿನ್‌ಗೌಡ ಟಿಕೆಟ್ ಆಕಾಂಕ್ಷಿತರಾಗಿದ್ದಾರೆ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಎಲ್.ಆರ್.ಶಿವರಾಮೇಗೌಡ, ಲಕ್ಷ್ಮಿಅಶ್ವಿನ್‌ಗೌಡ, ಜಿಪಂ ಸದಸ್ಯ. ಶಿವಪ್ರಕಾಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ನೆಲ್ಲಿಗೆರೆ ಬಾಲು, ಇತರ ಮುಖಂಡರು ಹಾಜರಿದ್ದರು.







