ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಧೀನದ ನಿಗಮ ಮಂಡಳಿಗಳ ಪ್ರಗತಿ ಪರಿಶೀಲನೆ ಸಭೆ

ತುಮಕೂರು, ಎ.19: ಮೊರಾರ್ಜಿ ವಸತಿ ಶಾಲೆಗಳ ನಿಯಂತ್ರಣವನ್ನು ಜಿಲ್ಲಾಧಿಕಾರಿ ಅಥವಾ ಜಿಪಂಗಳಡಿ ತರಲು ಹಾಗೂ ಈ ಶಾಲೆಗಳಿಗೆ ಅಗತ್ಯವಿರುವ ಆಹಾರ ಖರೀದಿಗಳನ್ನೂ ಕೂಡ ಜಿಲ್ಲಾಧಿಕಾರಿ, ಸಿಇಒಗಳಿಗೆ ನೀಡಲು ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೊಬೋ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಧೀನದ ನಿಗಮ ಮಂಡಳಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಅನುತ್ತೀರ್ಣವಾಗಿರುವ ಕುರಿತು ಪರಿಶೀಲಿಸಿದ ಸಮಿತಿಯು, ಸರಕಾರದ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರಾಗಿದ್ದು, ಅವರನ್ನು ನಿಮ್ಮ ಮಕ್ಕಳಿಗೆ ನೀಡುವ ಶಿಕ್ಷಣದಂತೆ ಈ ಮಕ್ಕಳಿಗೆ ನೀಡಲು ಕ್ರಮ ವಹಿಸಿ. ಮಕ್ಕಳು ಅನುತ್ತೀರ್ಣರಾಗದಂತೆ ತಡೆಯಲು ವಸತಿ ನಿಲಯದಲ್ಲಿ ಪ್ರತ್ಯೇಕವಾಗಿ ಶಿಕ್ಷಣ ಕೊಡಿಸಬೇಕು. ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕರು ಗಮನ ಹರಿಸಬೇಕು. ಇಲ್ಲದಿದ್ದರೆ ಅಂತಹ ಮೇಲ್ವಿಚಾರಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತಿ ಸಿಇಒಗೆ ಸೂಚಿಸಿದರು.
ಸರಕಾರದ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವ ಹಿಸುವ ಮೂಲಕ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಶೇ. 60 ರಿಂದ 65ರಷ್ಟು ಜನರು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದು, ಸರಕಾರದ ಯೋಜನೆಗಳನ್ನು ಈ ಸಮುದಾಯಕ್ಕೆ ತಲುಪಿಸುವ ಬಗ್ಗೆ ನಿಗಾ ವಹಿಸುವುದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಕರ್ತವ್ಯವಾಗಿದೆ ಎಂದರು.
ಸರಕಾರ ಹಿಂದುಳಿದ ವರ್ಗಗಳಿಗೆ ಸವಲತ್ತು ನೀಡುವ ಯೋಜನೆಗಳ ಬಗ್ಗೆ ಇಲಾಖೆಗಳು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಯಾವುದೇ ಯೋಜನೆಯಾಗಲಿ ಒಂದು ದೀಪವಿದ್ದಂತೆ. ಅದರ ಬೆಳಕು ಎಲ್ಲರಿಗೂ ತಲುಪಬೇಕು ಎಂಬುದು ನಮ್ಮ ಕಳಕಳಿ ಆಗಿದೆ ಎಂದರು. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯಡಿ ಬರುವ ಜಿಲ್ಲೆಯ ವಸತಿ ನಿಲಯಗಳಿಗೆ ಸೂಕ್ತ ನಿವೇಶನವನ್ನು ಗುರ್ತಿಸಿ ಇಲಾಖೆಗೆ ಶೀಘ್ರ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಆದಷ್ಟು ಶೀಘ್ರ ನಿರ್ಮಾಣ ಹಂತದಲ್ಲಿರುವ ಹಾಸ್ಟೆಲ್ ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.
ತುಮಕೂರು ಮಹಾನಗರಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರ ಮಾಡುವ 1,450 ವ್ಯಾಪಾರಸ್ಥರಿಗೆ ಗುರ್ತಿನ ಚೀಟಿಗಳನ್ನು ವಿತರಿಸಲಾಗಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ಅಧ್ಯಕ್ಷರಿಗೆ ತಿಳಿಸಿದರು.
ಸಬೆಯಲ್ಲಿ ಶಾಸಕರಾದ ಯು.ಬಿ.ಬಣಕಾರ್, ಡಾ.ರಫೀಕ್ ಅಹಮದ್, ತಿಮ್ಮರಾಯಪ್ಪ, ಎಂ.ಡಿ.ಲಕ್ಷ್ಮಿನಾರಾಯಣ, ಬಿ.ಜೆ.ಪಾಟೀಲ್ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಸಿಇಒ ಕೆ.ಜಿ. ಶಾಂತಾರಾಮ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.







