ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಸಮರ್ಪಕ ಬಳಕೆ: ವಿಚಾರ ಸಂಕಿರಣ
ಚಿಕ್ಕಮಗಳೂರು, ಎ.19: ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಸ್ವಚ್ಚ ಭಾರತ ಅಭಿಯಾನದ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಸಮರ್ಪಕ ಬಳಕೆ ಎಂಬ ವಿಷಯದ ಬಗ್ಗೆ ವಿಚಾರ ಸಂಕೀರಣವು ಬುಧವಾರ ನಡೆಯಿತು.
ಜಿಪಂ ಸಿಇಒ ಡಾ. ಆರ್. ರಾಗಪ್ರಿಯ ಮಾತನಾಡಿ, ಹಳ್ಳಿಗಳಲ್ಲಿ ಜನರು ಶೌಚಾಲಯವನ್ನು ಉಪಯೋಗಿಸುತ್ತಿಲ್ಲ. ಗ್ರಾಮೀಣ ಜನರಿಗೆ ಶೌಚಾಲಯದ ಮಹತ್ವದ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಸರಕಾರ ಹಲವು ಕಾರ್ಯಗಳನ್ನು ನಡೆಸುತ್ತಿದೆ. ಇದಕ್ಕೆ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು, ಹಳ್ಳಿಗಳಲ್ಲಿ ಶೌಚಾಲಯದ ಬಳಕೆ ಮಾಡುವುದರಿಂದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬಹದು. ಹಾಗೂ ರೋಗ-ರುಜಿನಗಳಿಂದ ಮುಕ್ತರಾಗಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶೌಚಾಲಯಗಳ ಸಮರ್ಪಕ ಬಳಕೆ ಬಗ್ಗೆ ವಿದ್ಯಾರ್ಥಿಗಳ ಹೊಸ ಹೊಸ ಸಲಹೆಗಳನ್ನು ಜಿಪಂ ಸಿಇಒ ರಾಗಪ್ರಿಯ ಸಂಗ್ರಹಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೆಲ ವಿದ್ಯಾರ್ಥಿಗಳು ಸಮರ್ಪಕ ನೀರು ಬಳಕೆ, ಅವಳಿ ಹೊಂಡ, ಪ್ಲಾಸ್ಟಿಕ್ ಕೋಟಿನ ಸಿಂಕ್ ನಿರ್ಮಾಣ ಹಾಗೂ ಸಾವಯವ ಗೊಬ್ಬರದ ಬಳಕೆ ಮತ್ತು ಉಪಯೋಗದ ಬಗ್ಗೆ ವಿಚಾರಗಳನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ವಹಿಸಿದ್ದರು. ಜಿಪಂ ಉಪಕಾರ್ಯದರ್ಶಿ ವಿಠ್ಠಲ್ ಮೊದಲಾದವರು ಉಪಸ್ಥಿತರಿದ್ದರು.







