ಶೇಕಡವಾರು ಅಂಕ ನಿಗದಿ: ಬಡ ವಿದ್ಯಾರ್ಥಿಗಳಿಗೆ ಸಿಗದ ಪಾಲಿಕೆಯ ಪ್ರೋತ್ಸಾಹ ಧನ
ಎನ್‌ಎಸ್‌ಯುಐ ಸಂಘಟನೆ ಆರೋಪ: ಪಾಲಿಕೆ ಆಡಳಿತ ನಿರಾಕರಣೆ

ಶಿವಮೊಗ್ಗ, ಎ.19: ಶಿವಮೊಗ್ಗ ಮಹಾನಗರ ಪಾಲಿಕೆಯು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ನೀಡುವ ಪ್ರೋತ್ಸಾಹ ಧನಕ್ಕೆ ಶೇಕಡವಾರು ಅಂಕ ನಿಗದಿ ಮಾಡಿ, ಅತೀ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ನೆರವು ನೀಡುತ್ತಿದೆ. ಇದರಿಂದ ಕಡಿಮೆ ಅಂಕಗಳಿಸಿದ ಬಡ ವರ್ಗದ ವಿದ್ಯಾರ್ಥಿಗಳು ಸಹಾಯಧನ ಸೌಲಭ್ಯದಿಂದ ವಂಚಿತವಾಗುತ್ತಿದ್ದಾರೆ ಎಂದು ಎನ್‌ಎಸ್‌ಯುಐ ಸಂಘಟನೆ ಆರೋಪಿಸಿದೆ.
ಮತ್ತೊಂದೆಡೆ ಈ ಆರೋಪವನ್ನು ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿ ನಿರಾಕರಿಸಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಯೋಜನೆಯಡಿ ಮೀಸಲಿರುವ ಅನುದಾನಕ್ಕೆ ಅನುಗುಣವಾಗಿ ಪ್ರೋತ್ಸಾಹ ಧನ ಮಂಜೂರು ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದಿನ ಸಾಲಿನಲ್ಲಿ ಶೇಕಡವಾರು ಅಂಕಗಳ ಪರಿಗಣನೆ ಮಾಡದೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗುತ್ತಿತ್ತು. ಆದರೆ 2016-17ನೇ ಸಾಲಿನಲ್ಲಿ ಶೇಕಡವಾರು ಅಂಕಗಳ ನಿಗದಿ ಮಾಡಿ ಪ್ರೋತ್ಸಾಹ ಧನ ಮಂಜೂರು ಮಾಡಲಾಗಿದೆ. ಇದರಿಂದ ಕಡಿಮೆ ಅಂಕ ಪಡೆದವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎನ್‌ಎಸ್‌ಯು ರಾಜ್ಯ ಮುಖಂಡ ಸಿ.ಜಿ.ಮಧುಸೂಧನ್ ದೂರಿದ್ದಾರೆ. ಎಸೆಸೆಲ್ಸಿಯಲ್ಲಿ ಶೇ.84ರಷ್ಟು, ಪಿಯುಸಿ ಹಾಗೂ ಉದ್ಯೋಗಾಧರಿತ ಡಿಪ್ಲೊಮಾ ಕೋರ್ಸ್ ಗಳಲ್ಲಿ ಶೇ.94.24ರಷ್ಟು, ಪ್ಯಾರಾ ಮೆಡಿಕಲ್ ಕೋರ್ಸ್-ಡಿಪ್ಲೊಮಾ-ಡಿ.ಇಡಿ-ಸಿಪಿಇಡಿ ಇತರ ತಾಂತ್ರಿಕ ತರಗತಿಗಳಿಗೆ 86.11 ರಷ್ಟು, ಬಿಎ, ಬಿಎಸ್ಸಿ, ಬಿಕಾಂ, ಎಂಎಸ್‌ಡಬ್ಲ್ಯೂ, ಎಂಸಿಎ, ಬಿಇ ಗೆ ಶೇ.90.13 ರಷ್ಟು, ಎಂ.ಇಡಿ, ಎಂ.ಪಿ.ಇಡಿ 80.08 ಹಾಗೂ ಎಂಬಿಬಿಎಸ್, ಬಿಡಿಎಸ್, ಎಂ.ಟೆಕ್, ಎಂ.ಎಸ್, ಎಂ.ಡಿ, ಎಂ.ಇ ತರಗತಿಗಳಿಗೆ ಶೇ.66.89ರಷ್ಟು ಅಂಕ ನಿಗದಿಗೊಳಿಸಿ, ಇದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಬಾಕಿ ಇರುವ ಅರ್ಜಿಗಳನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಡ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಇದರಲ್ಲಿಯೂ ಶೇಕಡವಾರು ಅಂಕ ನಿಗದಿಗೊಳಿಸಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ಕಲ್ಪಿಸುತ್ತಿರುವುದು ಸರಿಯಲ್ಲ. ಇದರಿಂದ ಕಡಿಮೆ ಅಂಕ ಗಳಿಸಿದ ನೂರಾರು ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಶೇಕಡವಾರು ಅಂಕ ನಿಗದಿ ರದ್ದುಪಡಿಸಬೇಕು. ಪ್ರೋತ್ಸಾಹ ಧನಕ್ಕೆ ಮೀಸಲಿಡುವ ಮೊತ್ತ ಹೆಚ್ಚಿಸಿ, ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೂ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಿ.ಜಿ.ಮಧುಸೂಧನ್ ಒತ್ತಾಯಿಸಿದ್ದಾರೆ.
ಬಡ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಪಾಲಿಕೆಯು ಹೆಚ್ಚಿನ ಅನುದಾನ ಮೀಸಲಿಟ್ಟು, ಹೆಚ್ಚಿನ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಶೇಕಡಾವಾರು ಅಂಕ ನಿಗದಿಗೊಳಿಸಿ, ಸೌಲಭ್ಯ ಕಲ್ಪಿಸಬಾರದು.
ಸಿ.ಜಿ.ಮಧುಸೂಧನ್, ಎನ್ನೆಸ್‌ಯುಐ ರಾಜ್ಯ ಮುಖಂಡ
ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯ ಸಿಗುತ್ತಿಲ್ಲ. ಅಂಕಗಳ ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ. ಇದು ಅನಿವಾರ್ಯ ಕೂಡ ಆಗಿದೆ. ಹಾಗಂತ ಇಂತಿಷ್ಟೇ ಅಂಕ ಪಡೆದವರು ಅರ್ಜಿ ಸಲ್ಲಿಸಬೇಕೆಂಬ ನಿಯಮ ಮಾಡಿಲ್ಲ. ಎನ್‌ಎಸ್‌ಯುಐ ಆರೋಪದಲ್ಲಿ ಹುರುಳಿಲ್ಲವಾಗಿದೆ.
ಐಡಿಯಲ್ ಗೋಪಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ







