ಚಿಕ್ಕಮಗಳೂರು: ಗುಳೆ ಹೊರಟ ರೈತಾಪಿ ಕುಟುಂಬಗಳು
ಹನಿ ನೀರಿಗೂ ಹಾಹಾಕಾರ, ಮರೀಚಿಕೆಯಾದ ಮಳೆ

ಚಿಕ್ಕಮಗಳೂರು, ಎ.19: ಕಡೂರು ತಾಲೂಕಿನ ನಿಡಘಟ್ಟ ಗ್ರಾಮ ಕಳೆದ ಹಲವು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ಶಾಶ್ವತ ನೀರಿನ ಮೂಲ ಇಲ್ಲದಿರುವ ಪರಿಣಾಮ ಕುಡಿಯುವ ನೀರಿಗಾಗಿ ಜನ ಹಾಗೂ ಜಾನುವಾರುಗಳು ಪರದಾಡುವ ಸ್ಥಿತಿ ಎದುರಾಗಿದ್ದು, ಜನರು ಗುಳೆಹೋಗುವತ್ತ ದೃಷ್ಟಿ ಹರಿಸಿದ್ದಾರೆ.
ಈಗಾಗಲೇ ನಿಡಘಟ್ಟ ಗ್ರಾಮದಿಂದ 1,200ಕ್ಕೂ ಅಧಿಕ ಕುಟುಂಬಗಳು ಗುಳೇ ಹೋಗಿವೆ. ಬೆಂಗಳೂರಿನ ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಆಡುಗೋಡಿ, ಹೆಬ್ಬಾಳದಂತಹ ಪ್ರದೇಶಗಳಲ್ಲಿ ಈ ಊರಿನ ಜನರು ಕಾಣ ಸಿಗುತ್ತಾರೆ. ಭೀಕರ ಬರಗಾಲಕ್ಕೆ ತುತ್ತಾಗಿ ನಾಪತ್ತೆಯಾಗಿರುವ ಇಲ್ಲಿನ ಜನರು ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ವಲಸೆ ಹೋಗುತ್ತಿದ್ದಾರೆ.
‘ನೀನು ಇಲ್ಲಿಗೆ ಬಂದಿದ್ದೀಯಾ, ನಾನು ಇಲ್ಲೇ ಕೆಲಸ ಮಾಡುತ್ತಿದ್ದೀನಿ, ನೀನು ಎಲ್ಲಿ-ಏನ್ ಕೆಲಸ ಮಾಡು ತ್ತಿದ್ದಿಯಾ? ಹೆಂಡತಿ-ಮಕ್ಕಳು ಎಲ್ಲಿದ್ದಾರೆ? ದನಕರುಗಳನ್ನು ಎಲ್ಲಿ ಬಿಟ್ಟು ಬಂದ್ದಿದೀಯ’ ಎಂಬ ಪ್ರಶ್ನೆಗಳೊಂದಿಗೆ ಅವರವರೇ ತಮ್ಮ ಕರುಣಾಜನಕ ಕಥೆಯನ್ನು ಪರಸ್ಪರ ಮಾತಾಡಿಕೊಂಡು ಕೊರಗುತ್ತಿದ್ದಾರೆ.
ಕಡೂರು ಮಳೆಯಾಶ್ರಿತ ತಾಲೂಕುಗಳಲ್ಲಿ ಒಂದಾಗಿದೆ. ಆದರೆ ಇಲ್ಲಿನ ಜನರಿಗೆ ಮಳೆ ಮರೀಚಿಕೆಯಾಗಿದೆ. ಎರಡು ದಶಕಗಳ ಬರಕ್ಕೆ ಬೇಸತ್ತ ಇಲ್ಲಿನ ಜನ ಇದೀಗ ಹಳ್ಳಿಗಳನ್ನು ಖಾಲಿ ಮಾಡುತ್ತಿದ್ದಾರೆ. ಹೀಗಾಗಿ ನಿಡಘಟ್ಟ ಗ್ರಾಮದ ಬಹುತೇಕ ರೈತರ ಮನೆಗಳು ಬೀಕೋ ಎನ್ನುತ್ತಿವೆ. ಇಲ್ಲಿನ ಭೀಕರ ಬರದ ಛಾಯೆಯ ನಡುವೆ ಹನಿ ನೀರಿಗೂ ಹಾಹಾಕಾರ, ಸರಕಾರದ ನಿರ್ಲಕ್ಷ್ಯದಿಂದ ಇಲ್ಲಿನ ಕುಟುಂಬಗಳಲ್ಲಿ ಹೈನುಗಾರಿಕೆ, ಕೃಷಿಯ ಬಗ್ಗೆ ಮೊದಲಿನ ಚೈತನ್ಯ ಉಳಿದಿಲ್ಲ. ಹಳ್ಳಿಗಳೆಲ್ಲಾ ವೃದ್ಧಾಶ್ರಮಗಳಾಗಿವೆ.
ಕಡೂರು ತಾಲೂಕಿನಾದ್ಯಂತ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿದೆ. 1,800 ಅಡಿ ಬೋರ್ ಕೊರಿಸಿದರೂ ಹನಿ ನೀರಿಗೂ ಹಾಹಾಕಾರ ಎದುರಾಗಿದೆ. ಕೆಲ ದಿನಗಳ ಕಾಲ ಕಾಫಿ ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ಆದರೆ ಆ ಹಣ ಯಾವುದಕ್ಕೂ ಸಾಲದ ಕಾರಣ ರೈತರು ಮನೆ-ಜಮೀನುಗಳನ್ನು ಪಾಳು ಬಿಟ್ಟು ಕೆಲಸ ಅರಸಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ವಯಸ್ಸಾದ ವಯೋವೃದ್ಧರು ಹಳ್ಳಿಗಳಲ್ಲಿ ಮನೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜಾನುವಾರುಗಳೆಲ್ಲಾ ಕಸಾಯಿಖಾನೆ ಪಾಲಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಕಳೆದ ಒಂದು ತಿಂಗಳಿನಿಂದ ಅಲ್ಲಲ್ಲಿ ಮಳೆಯಾಗಿದೆ. ಆದರೆ ನಿಡಘಟ್ಟ ಪ್ರದೇಶದಲ್ಲಿ ಮಳೆ ಬಂದಿಲ್ಲ. ಈ ಭಾಗಕ್ಕೆ ಇನ್ನೊಂದು ತಿಂಗಳಲ್ಲಿ ಮಳೆ ಬಾರದಿದ್ದರೆ ಇಲ್ಲಿನ ಪರಿಸ್ಥಿತಿ ಮತ್ತಷ್ಟು ಆತಂಕ ತರುವುದರಲ್ಲಿ ಎರಡು ಮಾತಿಲ್ಲ. ಭೀಕರ ಬರಕ್ಕೆ ಕಡೂರು ಭಾಗದ ಬಯಲುಸೀಮೆ ಅಕ್ಷರಶಃ ನಲುಗಿ ಹೋಗಿದೆ. ಬಡ ರೈತರು ತುತ್ತಿಗಾಗಿ ಗುಳೇ ಹೋಗುವಷ್ಟು ಅಸಹಾಯಕರಾಗಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದ ಪರಿಸ್ಥಿತಿ ಹೇಳತೀರದ್ದು. ಇನ್ನಾದರೂ ಸರಕಾರ ಇತ್ತ ಗಮನ ಹರಿಸಿ ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದ ರೈತರ ಸಹಿತ ಸಾಮಾನ್ಯ ಜನರನ್ನು ಕಾಪಾಡಬೇಕಿದೆ.







