ಹಿಮಾಚಲ, ಗುಜರಾತ್‌ನಲ್ಲಿ ಪಾರದರ್ಶಕ ಚುನಾವಣೆಗೆ ವ್ಯವಸ್ಥೆ
ದೃಢೀಕರಣಕ್ಕಾಗಿ ಮತದ ಮುದ್ರಿತ ಪ್ರತಿ ನೀಡುವ ಇವಿಎಂ

ಹೊಸದಿಲ್ಲಿ, ಎ.20: ಮುಂಬರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಸಂಪೂರ್ಣ ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಮತದಾರ- ದೃಢೀಕೃತ ಕಾಗದ ಪರಿಶೀಲನಾ ಪ್ರಯೋಗ (ವಿವಿಪಿಎಟಿ) ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಈ ವರ್ಷದ ಕೊನೆಗೆ ಈ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈಗಾಗಲೇ ವಿವಿಪಿಟಿಎ ಅಳವಡಿಸಿರುವ ಇವಿಎಂಗಳನ್ನು ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ವಿವಿಪಿಎಟಿ ಯಂತ್ರಗಳು, ಮತಯಂತ್ರಗಳಲ್ಲಿ ಚಲಾಯಿಸಿದ ಮತಗಳ ಮುದ್ರಿತ ಪ್ರತಿಯನ್ನು ನೀಡಲಿವೆ. ಈ ಮುದ್ರಿತ ಪ್ರತಿಯನ್ನು ಒಂದು ಪ್ರತ್ಯೇಕ ಪೆಟ್ಟಿಗೆಯಲ್ಲಿ ದಾಸ್ತಾನು ಮಾಡಿ, ಚುನಾವಣೆ ಬಗೆಗಿನ ಯಾವುದೇ ವ್ಯಾಜ್ಯಗಳಿದ್ದ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಎರಡು ರಾಜ್ಯಗಳಿಗೆ ಗರಿಷ್ಠ 80 ಸಾವಿರ ವಿವಿಪಿಎಟಿ ಯಂತ್ರಗಳ ಅಗತ್ಯತೆ ಇದ್ದು, ಈಗಾಗಲೇ ಇಂತಹ 55 ಸಾವಿರ ಯಂತ್ರಗಳನ್ನು ಹೊಂದಲಾಗಿದೆ. ಉಳಿದಂತೆ ಅಗತ್ಯವಿರುವ ಯಂತ್ರಗಳ ಪೂರೈಕೆಗಾಗಿ ಎರಡು ಕಂಪೆನಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮೂಲಗಳು ವಿವರಿಸಿವೆ.
ಭವಿಷ್ಯದ ಎಲ್ಲ ಚುನಾವಣೆಗಳನ್ನು ಶೇಕಡ 100ರಷ್ಟು ವಿವಿಪಿಎಟಿ ಯಂತ್ರಗಳನ್ನು ಅಳವಡಿಸಿದ ಇವಿಎಂಗಳ ಮೂಲಕವೇ ನಿರ್ವಹಿಸಬೇಕು ಎಂದು ರಾಜಕೀಯ ಪಕ್ಷಗಳು ಆಗ್ರಹಿಸಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರಕ್ಕೆ ಆಯೋಗ ಬಂದಿದೆ.