ತಾಜ್‌ಮಹಲ್ ಹೊಟೇಲ್ ಹರಾಜಾಗಲೇ ಬೇಕು: ಸುಪ್ರೀಂಕೋರ್ಟ್

ಹೊಸದಿಲ್ಲಿ, ಎ.20: ಟಾಟಾ ಸಮೂಹದಿಂದ ನಡೆಸಲ್ಪಡುತ್ತಿರುವ ತಾಜ್ ಮಾನ್‌ಸಿಂಗ್ ಎಂದೇ ಜನಪ್ರಿಯವಾಗಿರುವ ದಿಲ್ಲಿಯ ಐಕಾನ್ ತಾಜ್‌ಮಹಲ್ ಹೊಟೇಲ್‌ನ್ನು ಹರಾಜುಗೊಳಿಸಲೇಬೇಕು ಎಂದು ಗುರುವಾರ ಸುಪ್ರೀಂಕೋರ್ಟ್ ಆದೇಶಿಸಿದೆ.
ಒಂದು ವೇಳೆ ಆನ್‌ಲೈನ್‌ನಲ್ಲಿ ನಡೆಯುವ ಹರಾಜಿನಲ್ಲಿ ಸರಿಯಾದ ಬಿಡ್ ಸಿಗದೆ ಇದ್ದರೆ ಟಾಟಾ ಸಮೂಹ ಆರು ತಿಂಗಳಲ್ಲಿ ಹೊಟೇಲ್‌ನ್ನು ತೆರವುಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಷ್ಟ್ರ ರಾಜಧಾನಿಯ ಕೇಂದ್ರಭಾಗದಲ್ಲಿರುವ ತಾಜ್ ಮಹಲ್ ಹೊಟೇಲ್‌ನ್ನು ಟಾಟಾ ಸಮೂಹಕ್ಕೆ 33 ವರ್ಷಗಳ ಅವಧಿಗೆ ಲೀಸ್‌ಗೆ ನೀಡಲಾಗಿತ್ತು. ಲೀಸ್‌ನ ಒಪ್ಪಂದ 2011ರಲ್ಲಿ ಕೊನೆಗೊಂಡಿತ್ತು. ಆ ಬಳಿಕ ಹೊಟೇಲ್ ವಿಭಾಗದ ಸಹ ವ್ಯಾಪಾರಿಗಳಿಗೆ 9 ಬಾರಿ ಅವಧಿ ವಿಸ್ತರಣೆ ಮಾಡಲಾಗಿತ್ತು. ಕಳೆದ ತಿಂಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊಟೇಲ್‌ನ್ನು ಹರಾಜು ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು.
ಹೊಟೇಲ್ ನಿವೇಶನದ ಮೇಲೆ ಹಿಡಿತಹೊಂದಿರುವ ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ ವಿರುದ್ಧ ಟಾಟಾ ಸಮೂಹ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹರಾಜು ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು.
ಮಾರುಕಟ್ಟೆಯ ಬಾಡಿಗೆಯ ದರದ ಆಧಾರದಲ್ಲಿ ಹೊಸ ಲೀಸ್ ಬಗ್ಗೆ ಟಾಟಾ ಸಮೂಹ ಪ್ರಸ್ತಾವ ಸಲ್ಲಿಸಿತ್ತು. ಈಗಿನ ವ್ಯವಸ್ಥೆಯಿಂದ ಮುನ್ಸಿಪಲ್ ಕೌನ್ಸಿಲ್ ಸಾಕಷ್ಟು ಆದಾಯ ಪಡೆಯುತ್ತಿದೆ ಎಂದು ಟಾಟಾ ಸಮೂಹ ಆರೋಪಿಸಿತ್ತು.





