ಮುಸುಕುಧಾರಿಗಳ ತಂಡದಿಂದ ತಲವಾರು ದಾಳಿ: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಮೃತ್ಯು

ಬಂಟ್ವಾಳ, ಎ. 20: ಕರೋಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಹಾಡಹಗಲೇ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡವೊಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ಬಂಟ್ವಾಳ ತಾಲೂಕು ಪಂಚಾಯತ್‌ನ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯವರ ಪುತ್ರ, ಕಾಂಗ್ರೆಸ್ ಮುಖಂಡ, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿ(42) ಕೊಲೆಗೀಡಾದವರು.
ಗುರುವಾರ ಪೂರ್ವಾಹ್ನ 11:30ರ ಸುಮಾರಿಗೆ ಎರಡು ಬೈಕ್‌ನಲ್ಲಿ ಬಂದಿದ್ದಾರೆನ್ನಲಾದ ನಾಲ್ವರು ಮುಸುಕುಧಾರಿಗಳ ತಂಡ ಗ್ರಾಮ ಪಂಚಾಯತ್ ಕಚೇರಿಯ ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಯಲ್ಲಿ ಕುಳಿತಿದ್ದ ಜಲೀಲ್‌ರವರ ಮುಖಕ್ಕೆ ಮೆಣಸಿನ ಪುಡಿ ಎರಚಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಚೇರಿಯ ಒಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ರನ್ನು ಅವರ ಸಹೋದರ ಅನ್ವರ್ ಕರೋಪಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ತಲವಾರು ದಾಳಿಯಿಂದ ಜಲೀಲ್‌ರವರ ತಲೆ, ಕುತ್ತಿಗೆ, ಹೊಟ್ಟೆಯ ಭಾಗಕ್ಕೆ ಆಳವಾದ ಗಾಯಗಳಾಗಿವೆ. ಪ್ರಾಥಮಿಕ ವರದಿಯಲ್ಲಿ ಕೇರಳ ಕಡೆಯಿಂದ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ವೃತ್ತಿಪರ ಹಂತಕರೇ ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ಈ ಕೊಲೆ ಪೂರ್ವ ಯೋಜಿತ ಕೃತ್ಯದಂತೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಪಂಚಾಯತ್‌ನ ಸಿಬ್ಬಂದಿಯಿಬ್ಬರು ದುಷ್ಕರ್ಮಿಗಳು ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಗೆ ನುಗ್ಗುವ ವೇಳೆ ತಡೆಯೊಡ್ಡಿದ್ದರೂ ಅವರನ್ನು ಬೆದರಿಸಿ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳು ಜಲೀಲ್ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಜಲೀಲ್ ಕೊಲೆಗೆ ನಿರ್ದಿಷ್ಠ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಜಲೀಲ್ ಪರಿಸರದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಇದ್ದು ವೈಯಕ್ತಿಕವಾಗಿ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ.
ಕೊಲೆಯ ಬಳಿಕ ಪರಿಸರದಲ್ಲಿ ವಿವಿಧ ಸುದ್ದಿಗಳು ಹರಡುತ್ತಿದ್ದು ಕೆಲವು ತಿಂಗಳ ಹಿಂದೆ ಕರೋಪಾಡಿಯಲ್ಲಿ ಮನೆ ಯಜಮಾನನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ನಿಧಿಗಾಗಿ ಶೋಧ ನಡೆಸಿ ಪರಾರಿಯಾದ ತಂಡದ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಿಧಿ ಪ್ರಕರಣದಲ್ಲಿ ಜೈಲು ಸೇರಿದ್ದ ತಂಡದ ಮೂವರು ಮೂರು ದಿನಗಳ ಹಿಂದೆಯಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಗ್ರಾಮದಲ್ಲಿ ಬಾರ್ ತೆರೆಯಲು ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ನೀಡಲು ಜಲೀಲ್ ನಿರಾಕರಿಸುತ್ತಿದ್ದರು. ಹಲವು ಸಮಯದಿಂದ ಕೆಲವು ರಾಜಕಾರಣಿಗಳು ಒತ್ತಡ ಹಾಕುತ್ತಿದ್ದರೂ ಬಾರ್‌ಗೆ ಪರವಾನಿಗೆ ನೀಡಲು ನಿರಾಕರಿಸುತ್ತಿದ್ದ ಜಲೀಲ್‌ಗೆ ಎರಡು ದಿನಗಳ ಹಿಂದೆ ಕೊಲೆ ಬೆದರಿಕೆಯೊಂದು ಬಂದಿತ್ತು ಎನ್ನಲಾಗಿದೆ.
ಕೊಲೆಗೀಡಾದ ಜಲೀಲ್ ತಂದೆಯಂತೆ ರಾಜಕೀಯ ಹಾದಿ ತುಳಿದಿದ್ದರು. ತಂದೆ ಉಸ್ಮಾನ್ ಕರೋಪಾಡಿಯೊಂದಿಗೆ ಆರಂಭದಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿದ್ದ ಅವರು ಜೆಡಿಎಸ್ ಯೂತ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಂದೆಯೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರಗೊಂಡ ಅವರು ಎರಡು ಬಾರಿ ಕರೋಪಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೊದಲ ಆಯ್ಕೆಯಲ್ಲೇ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರೂ ಆಗಿದ್ದ ಕನ್ಯಾನ, ಕರೋಪಾಡಿ ಭಾಗದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಜಲೀಲ್ ಉಳ್ಳಾಲ ಕೋಟೆಪುರದ ನಿವೃತ್ತ ಬ್ಯಾಂಕ್ ಅಧಿಕಾರಿ ಅಹ್ಮದ್ ಅಬ್ಬಾಸ್ ಎಂಬವರ ಪುತ್ರಿಯನ್ನು ವಿವಾಹವಾಗಿದ್ದು ದಂಪತಿಗೆ ಮೂವರು ಮಕ್ಕಳಿದ್ದಾರೆ.
ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಸಹಾಯ ಅಧೀಕ್ಷಕ ಡಾ. ರವೀಶ್ ಸಿ. ಆರ್., ಪುತ್ತೂರು ಸಹಾಯ ಅಧೀಕ್ಷಕ ಭಾಸ್ಕರ ರೈ., ವೃತ್ತ ನಿರೀಕ್ಷಕ ಮಂಜಯ್ಯ, ಡಿಸಿಐಬಿ ನಿರೀಕ್ಷಕ ಅಮಾನುಲ್ಲಾ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಬೆರಳಚ್ಚು ತಜ್ಞರಾದ ಗೌರೀಶ್ ಅವರ ತಂಡ ಸ್ಥಳದಲ್ಲಿ ವಿವಿಧ ವಸ್ತುಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಬಂಟ್ವಾಳ ನಗರ ಠಾಣೆಯ ರಕ್ಷಿತ್ ಎ.ಕೆ., ಗ್ರಾಮಾಂತರ ಠಾಣೆಯ ಉಮೇಶ್, ವೇಣೂರು ಠಾಣೆ ಲೋಲಾಕ್ಷ, ಧರ್ಮಸ್ಥಳ ಠಾಣೆಯ ಕೊರಗಪ್ಪ ನಾಯ್ಕ ಸೇರಿ ವಿವಿಧ ಠಾಣೆಗಳ ಉಪನಿರೀಕ್ಷಕರು ಸ್ಥಳಕ್ಕಾಗಮಿಸಿ ಬಂದೋಬಸ್ತು ಕಲ್ಪಿಸಿದರು. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.







