ಲಾಭ ಪಡೆದವರಿಂದಲೇ ಸಚಿವರು, ಮುಖಂಡರ ತೇಜೋವಧೆ: ಕಾಂಗ್ರೆಸ್ ನಾಯಕರ ಆರೋಪ

ಮಂಗಳೂರು, ಎ.20: ವಿವಿಧ ಸಂದರ್ಭಗಳಲ್ಲಿ ರಾಜಕೀಯ ಅಧಿಕಾರದ ಲಾಭ ಪಡೆದವರೇ ಇದೀಗ ಸಚಿವರು ಮತ್ತು ಮುಖಂಡರ ತೇಜೋವಧೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಗುರುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್ ಮತ್ತು ಶಾಹುಲ್ ಹಮೀದ್, ಸಿಸಿಬಿ ಪೊಲೀಸರಿಂದ ಅಹ್ಮದ್ ಖುರೇಷಿ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಕೆಲವು ಮಂದಿ ಇದೀಗ ಸಚಿವರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್ ಹಾಗೂ ಪಕ್ಷದ ಕೆಲವು ಮುಖಂಡರ ತೇಜೋವಧೆಯಲ್ಲಿ ತೊಡಗಿರುವುದು ಖಂಡನೀಯ ಎಂದರು.
ಸಚಿವ ರಮಾನಾಥ ರೈಯ ಜಾತ್ಯತೀತ ನಿಲುವು ಏನು ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಪಸಂಖ್ಯಾತರ ಬಗ್ಗೆ ಅವರಿಗೆ ಇರುವ ಕಾಳಜಿ ಕೂಡ ಎಲ್ಲರಿಗೂ ಗೊತ್ತಿದೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾದಾಗ ಅವರು ಸಮರ್ಥವಾಗಿ ಧ್ವನಿ ಎತ್ತಿದ್ದಾರೆ. ಯು.ಟಿ.ಖಾದರ್ ಕೂಡ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಮಂದಿ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಂ.ಎಸ್.ಮುಹಮ್ಮದ್ ಮತ್ತು ಶಾಹುಲ್ ಹಮೀದ್ ಹೇಳಿದರು.
ಅಹ್ಮದ್ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ತನಿಖೆಯ ಬಳಿಕ ಸತ್ಯಾಂಶ ಏನು ಎಂಬುದು ತಿಳಿಯಲಿದೆ. ಆದರೆ, ಕೆಲವು ಮಂದಿ ಅಹ್ಮದ್ ಖುರೇಷಿಯ ಆರೋಗ್ಯ ಸುಧಾರಿಸುವ ಬದಲು ಹದಗೆಡಲು ಬಯಸಿದಂತೆ ವರ್ತಿಸುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ರಜನೀಶ್, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ಪಕ್ಷದ ಮುಖಂಡ ಸಂತೋಷ್ ಕುಮಾರ್ ಬರ್ಕೆ ಉಪಸ್ಥಿತರಿದ್ದರು.







