ಪೋಲೀಸರ ಎದುರಲ್ಲೇ ಕೊಲೆ ಆರೋಪಿ ಗೋರಕ್ಷಕನನ್ನು ಭಗತ್ ಸಿಂಗ್ ಗೆ ಹೋಲಿಸಿದ ಗೋ ರಕ್ಷಕರ ನಾಯಕಿ !
ಇದು ಕೊಲೆಗಿಂತಲೂ ಭೀಕರ

ಹೊಸದಿಲ್ಲಿ,ಎ.20 : ಸ್ವಘೋಷಿತ ಗೋರಕ್ಷಕನೊಬ್ಬನನ್ನು ಗೋರಕ್ಷಕರ ನಾಯಕಿಯೊಬ್ಬಳು ಪೊಲೀಸರ ಎದುರೇ ಭಗತ್ ಸಿಂಗ್ ಗೆ ಹೋಲಿಸಿದ ಘಟನೆ ಹಲವರ ಹುಬ್ಬೇರಿಸಿದೆ.
ಕೆಲ ದಿನಗಳ ಹಿಂದೆ ಆಲ್ವಾರ್ ನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ 55 ವರ್ಷದ ಡೈರಿ ಮಾಳಕ ಪೆಹ್ಲು ಖಾನ್ ರನ್ನು ರಾಜಸ್ಥಾನದಲ್ಲಿ ಗೋರಕ್ಷಕರು ಹೊಡೆದು ಸಾಯಿಸಿದ್ದರೆ, ಈ ಘಟನೆ ನಡೆದು ಹದಿನೈದು ದಿನಗಳ ನಂತರ ಕಾಣಿಸಿಕೊಂಡ ವೀಡಿಯೊವೊಂದರಲ್ಲಿ ಖಾನ್ ಕೊಲೆ ಸಂಬಂಧ ಬಂಧಿತರಾದ ಐದು ಮಂದಿಯನ್ನು ಗೋರಕ್ಷಕರ ನಾಯಕಿಯೊಬ್ಬಳು ಪ್ರಶಂಸಿಸಿದ್ದಾಳೆ.
ಅಷ್ಟೇ ಅಲ್ಲ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಅವರಲ್ಲೊಬ್ಬನಾದ 19 ವರ್ಷದ ಬಿಪಿನ್ ಯಾದವ್ ಎಂಬವವನ್ನು ಭಗತ್ ಸಿಂಗ್ ಗೆ ಹೋಲಿಸಿದ್ದಾಳೆ. ಈ ಹಿಂದಿನ ವೀಡಿಯೋದಲ್ಲಿ ಪೆಹ್ಲು ಖಾನ್ ಗೆ ಬಿಪಿನ್ ಬೆಲ್ಟಿನಿಂದ ಹೊಡೆಯುವುದು ಕಂಡಿದ್ದರೆ ಇತ್ತೀಚೆಗೆ ಆತನನ್ನು ವಾರ್ಷಿಕ ಪರೀಕ್ಷೆ ಬರೆಯುವ ಸಲುವಾಗಿ ಕಾಲೇಜಿಗೆ ಕರೆತಂದಿದ್ದರೆ ಈ ಸಂದರ್ಭ ಅಲ್ಲಗೆ ಆಗಮಿಸಿದ್ದ ಅವರ ನಾಯಕಿ ಕಮಲ್ ದೀದಿ ಬಿಪಿನ್ ನನ್ನು ಉದ್ದೇಶಿಸಿ ‘‘ ಚಿಂತೆ ಮಾಡಬೇಡ. ಇಡೀ ಭಾರತ ನಿನ್ನ ಜತೆಗಿದೆ’’ ಎಂದಿದ್ದಾಳೆ.
ನಂತರ ಇತರ ಯುವಕರತ್ತ ತಿರುಗಿ ‘‘ಈ ಹುಡುಗರು ಆಝಾದ್ (ಚಂದ್ರಶೇಖರ್) ಮತ್ತು ಭಗತ್ ಸಿಂಗ್ ಅವರಂತೆ ಅವರು ಯಾವುದೇ ತಪ್ಪು ಮಾಡಿಲ್ಲ,’’ ಎನ್ನುತ್ತಾಳೆ. ‘‘ಎಲ್ಲವೂ ಕೆಲವೇ ದಿನಗಳಲ್ಲಿ ಸರಿಯಾಗುವುದು. ನಂತರ ಏನಾಗುವುದೆಂದು ನಿನಗೆ ಊಹಿಸುವುದೂ ಅಸಾಧ್ಯ,’’ ಎಂದು ಬಿಪಿನ್ ಗೆ ಕಮಲ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಜೈಲಿನಲ್ಲಿ ಸುಮ್ಮನೆ ಕೂರದೆ ಇತರರಿಗೆ ಗೋ ರಕ್ಷಣೆಯ ಬಗ್ಗೆ ತಿಳಿ ಹೇಳಬೇಕು ಎಂದೂ ಆಕೆ ಹೇಳಿದ್ದಾಳೆ. ಬಿಪಿನ್ ನನ್ನು ಕಾಲೇಜಿನೊಳಗೆ ಕರೆದುಕೊಂಡು ಹೋಗುತ್ತಿದ್ದ ಪೊಲೀಸರು ಮಾತ್ರ ತುಟಿ ಪಿಟಿಕ್ಕೆನ್ನಿರಲಿಲ್ಲ.
ಕೇಸರಿ ವಸ್ತ್ರಧಾರಿಣಿಯಾಗಿದ್ದ ಕಮಲ್ ದೀದಿ ರಾಷ್ಟ್ರೀಯ ಮಹಿಳಾ ಗೋ ರಕ್ಷಕ ದಳದ ಅಧ್ಯಕ್ಷೆಯಾಗಿದ್ದು ಇತ್ತೀಚೆಗೆ ಜೈಪುರದಲ್ಲಿ ಹೊಟೇಲೊಂದು ಗೋಮಾಂಸವನ್ನು ಗ್ರಾಹಕರಿಗೆ ನೀಡುತ್ತಿದೆಯೆಂದು ದೂರಿ ಅಲ್ಲಿಗೆ 100ಕ್ಕೂ ಹೆಚ್ಚು ಮಂದಿ ದಾಳಿ ನಡೆಸಿದ್ದರೆ ಈ ಘಟನೆಯ ಹಿಂದೆ ಕಮಲ್ ದೀದಿಯ ಸಂಘಟನೆಯಿತ್ತು ಎಂದು ತಿಳಿದು ಬಂದಿದೆ. ಸ್ಥಳೀಯಾಡಳಿತ ಹೊಟೇಲಿಗೆ ಮುದ್ರೆ ಹಾಕಲು ನಿರ್ಧರಿಸಿದ ನಂತರವಷ್ಟೇ ದಾಳಿಕೋರರು ಹಿಂದಿರುಗಿದ್ದರು.