ಶರೀಫ್ ವಿರುದ್ಧ ಜಂಟಿ ತನಿಖೆಗೆ ಆದೇಶಿಸಿದ ಪಾಕಿಸ್ತಾನದ ಸುಪ್ರೀಂಕೋರ್ಟ್
ತೆರಿಗೆ ವಂಚಿಸಿ ವಿದೇಶದಲ್ಲಿ ಕಾನೂನು ಬಾಹಿರವಾಗಿ ಹೂಡಿಕೆ ಆರೋಪ

ಕರಾಚಿ,.20: ತೆರಿಗೆ ವಂಚಿಸಿ ವಿದೇಶದಲ್ಲಿ ಕಾನೂನು ಬಾಹಿರವಾಗಿ ಹೂಡಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಪ್ರಧಾನಮಂತ್ರಿ ನವಾಝ್ ಶರೀಫ್ ವಿರುದ್ಧ ಜಂಟಿ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ವಿದೇಶದಲ್ಲಿ ಕಾನೂನು ಬಾಹಿರವಾಗಿ ಹೂಡಿಕೆ ಮಾಡಿದವರ ಹೆಸರುಗಳು ಕಳೆದ ವರ್ಷ ಪನಾಮಾ ಪೇಪರ್‌ನಲ್ಲಿ ಸೋರಿಕೆಯಾಗಿದ್ದು, ಶರೀಫ್ ಹಾಗೂ ಅವರ ಕುಟುಂಬದವರು ಲಂಡನ್‌ನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಬಹಿರಂಗವಾಗಿತ್ತು.
ಶರೀಫ್ ವಿರುದ್ಧ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರುಗಳಿರುವ ಪಾಕ್‌ನ ಸುಪ್ರೀಂಕೋರ್ಟ್ ಪೀಠ ಜಂಟಿ ತನಿಖೆಗೆ ಆದೇಶಿಸಿದ್ದು, 60 ದಿನಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ.ಸೇನಾ ಗುಪ್ತಚರ ಏಜೆನ್ಸಿ ಸಹಿತ ಇತರ ಏಜೆನ್ಸಿಗಳ ಅಧಿಕಾರಿಗಳು ಜಂಟಿಯಾಗಿ ತನಿಖೆ ನಡೆಸಲಿದ್ದಾರೆ.
ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಇತರರು ಶರೀಫ್ ಕುಟುಂಬದವರು ಲಂಡನ್‌ನಲ್ಲಿ ಅಕ್ರಮ ಆಸ್ತಿ ಹೊಂದಿರುವುದನ್ನು ಪ್ರಶ್ನಿಸಿ ಸುಪ್ರೀಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು. ಸಂವಿಧಾನದ ಆರ್ಟಿಕಲ್ 62 ಹಾಗೂ 63ರ ಅಡಿಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ 67ರ ಹರೆಯದ ಶರೀಫ್‌ರನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದ್ದರು





