ವಿಮಾನ ಅಪಹರಣ ಬೆದರಿಕೆಯೊಡ್ಡಿದ್ದ ಆರೋಪಿ ಸೆರೆ

ಹೈದರಾಬಾದ್,ಎ.20: ಎ.15ರಂದು ಮುಂಬೈ ಪೊಲೀಸರಿಗೆ ಹುಸಿ ವಿಮಾನ ಅಪಹರಣ ಬೆದರಿಕೆಯ ಇ-ಮೇಲ್ ರವಾನಿಸಿದ್ದ ಇಲ್ಲಿಯ ಉದ್ಯಮಿಯೋರ್ವನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ತನ್ನ ‘ಗರ್ಲ್ ಫ್ರೆಂಡ್’ ತನ್ನ ಉದ್ದೇಶಿತ ಮುಂಬೈ-ಗೋವಾ ಪ್ರಯಾಣವನ್ನು ಮುಂದೂಡಬೇಕೆಂದು ಬಯಸಿದ್ದ ಆತ ಈ ಕುಕೃತ್ಯ ವನ್ನೆಸಗಿದ್ದ.
ಹೈದರಾಬಾದ್‌ನ ಮಿಯಾಪುರ ನಿವಾಸಿಯಾಗಿರುವ ಆರೋಪಿ ಎಂ.ವಂಶಿಕೃಷ್ಣ (32) ಸಾರಿಗೆ ಉದ್ಯಮಿಯಾಗಿದ್ದು, ವಿವಾಹಿತನಾಗಿರುವ ಈತ ಓರ್ವ ಪುತ್ರಿಯ ಅಪ್ಪನೂ ಆಗಿದ್ದಾನೆ.
ವಂಶಿ ಫೇಸ್‌ಬುಕ್ ಮೂಲಕ ಚೆನ್ನೈನ ಮಹಿಳೆಯೊಂದಿಗೆ ನಂಟು ಬೆಳೆಸಿಕೊಂಡಿದ್ದು, ಆಕೆ ಮುಂಬೈನಿಂದ ಗೋವಾಕ್ಕೆ ಮೋಜಿನ ಪ್ರವಾಸ ಮಾಡಲು ಬಯಸಿದ್ದಳು. ತನಗಾಗಿ ಎ.16ರಂದು ಮುಂಬೈ ವಿಮಾನದ ಟಿಕೆಟ್ ಬುಕ್ ಮಾಡುವಂತೆ ಮತ್ತು ಅಂದು ಅಲ್ಲಿ ತನ್ನನ್ನು ಭೇಟಿಯಾಗುವಂತೆ ಆಕೆ ವಂಶಿಗೆ ದುಂಬಾಲು ಬಿದ್ದಿದ್ದಳು.
ಆದರೆ ಈ ಮೋಜಿನ ಪ್ರವಾಸಕ್ಕೆ ವಂಶಿ ಬಳಿ ದುಡ್ಡಿರಲಿಲ್ಲ. ಹೀಗಾಗಿ ಆಕೆಯ ಹೆಸರಿನಲ್ಲಿ ಚೆನ್ನೈನಿಂದ ಮುಂಬೈಗೆ ನಕಲಿ ಟಿಕೆಟ್ ಸೃಷ್ಟಿಸಿ ಅದನ್ನು ಎ.15ರಂದು ಮಧ್ಯಾಹ್ನ ಆಕೆಗೆ ಇ-ಮೇಲ್ ಮಾಡಿದ್ದ. ಬಳಿಕ ಮಹಿಳೆಯೋರ್ವಳ ಹೆಸರಿನಲ್ಲಿ ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳನ್ನು ಅಪಹರಿಸಲು ಆರು ಜನರು ಸಂಚು ರೂಪಿಸಿದ್ದಾರೆ ಎಂಬ ಬೆದರಿಕೆಯ ಇ-ಮೇಲ್ ಅನ್ನು ಮುಂಬೈ ಪೊಲೀಸರಿಗೆ ರವಾನಿಸಿದ್ದ.
ತನ್ನ ಗೆಳತಿ ವಿಮಾನ ನಿಲ್ದಾಣಕ್ಕೆ ಹೋಗಬಾರದು ಎಂದು ವಂಶಿ ಬಯಸಿದ್ದ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ವಂಶಿಯ ಬೆದರಿಕೆಯ ಹಿನ್ನೆಲೆಯಲ್ಲಿ ಎ.16ರಂದು ಈ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿತ್ತು.







