ಕೆಂಪು ಗೂಟ ಹೋಯಿತು : ನಮ್ಮ ' ಗಣ್ಯರು' ಅನುಭವಿಸುವ ಇತರ ಸವಲತ್ತುಗಳೇನು ನೋಡಿ
ಹೊಸದಿಲ್ಲಿ,ಎ.20 : ಪ್ರಧಾನಿ ನರೇಂದ್ರ ಮೋದಿಯ ಅಣತಿಯಂತೆ ಕೆಂಪು ಗೂಟದ ಸಂಸ್ಕೃತಿ ಅಂತ್ಯವಾಗಿದೆ. ತುರ್ತು ಸೇವೆಗಳ ವಾಹನಗಳನ್ನು ಹೊರತು ಪಡಿಸಿ ಪ್ರಧಾನಿ, ರಾಷ್ಟ್ರಪತಿಗಳೂ ಸೇರಿದಂತೆ ಯಾವುದೇ ವಿಐಪಿಯ ವಾಹನದಲ್ಲಿ ಕೆಂಪು ದೀಪವಿರುವಂತಿಲ್ಲ.
ಪ್ರಧಾನಿಯ ಆದೇಶವನ್ನು ಪ್ರಥಮವಾಗಿ ಪಾಲಿಸಿದವರಲ್ಲಿ ಜವುಳಿ ಸಚಿವೆ ಸ್ಮೃತಿ ಇರಾನಿ ಒಬ್ಬರಾಗಿದ್ದಾರೆ. ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಿರುವ ಇರಾನಿ ಅದರ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಈ ಕೆಂಪು ಗೂಟದ ಸಂಸ್ಕೃತಿಯನ್ನು ನಿಲ್ಲಿಸಿ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾರೆ. ದೇಶದ ಎಲ್ಲಾ ಜನರೂ ವಿಐಪಿಗಳು ಎಂದೂ ಅವರು ಹೇಳಿದ್ದಾರೆ. ಅದೇನೋ ಸರಿ ಆದರೆ ಈ ದೇಶದ ಗಣ್ಯರು, ಅರ್ಥಾತ್ ವಿಐಪಿಗಳು ಜನಸಾಮಾನ್ಯರಿಗಿರದ ಇನ್ನೆಷ್ಟೋ ಉಚಿತ ಸವಲತ್ತುಗಳನ್ನೂ ಅನುಭವಿಸುತ್ತಿದ್ದಾರೆ.
ಅವುಗಳಲ್ಲಿ ಕೆಲವು ಇಲ್ಲಿವೆ ಓದಿ.
► ನಮ್ಮ ಜನಪ್ರತಿನಿಧಿಗಳ ಸಂಭಾವನೆಗೆ ತೆರಿಗೆ ವಿನಾಯಿತಿಯಿದೆ.
► ಲಾಂಡ್ರಿ ಮುಂತಾದ ಅವರ ದೈನಂದಿನ ಖರ್ಚುವೆಚ್ಚಗಳನ್ನು ಸರಕಾರವೇ ನಿಭಾಯಿಸುತ್ತದೆ.
► ವಿಐಪಿ ಒಬ್ಬರ ರಕ್ಷಣೆಗೆ ಸುಮಾರು 17 ಪೊಲೀಸರನ್ನು ನಿಯೋಜಿಸಲಾಗುತ್ತದೆ.
► ವಿಮಾನ ನಿಲ್ದಾಣಗಳಲ್ಲಿ ಸುರಕ್ಷಾ ತಪಾಸಣೆಗೆ ವಿವಿಐಪಿಗಳನ್ನು ನಿಲ್ಲಿಸಲಾಗುವುದಿಲ್ಲ.
► ಪ್ರತಿ ವಿಐಪಿಗೆ 50,000 ಯುನಿಟ್ ಉಚಿತ ವಿದ್ಯುತ್ ಹಾಗೂ ನೀರು ಒದಗಿಸಲಾಗುತ್ತದೆ.
► ಸರಕಾರ ಒದಗಿಸಿದ ಸುಸಜ್ಜಿತ ನಿವಾಸಗಳಲ್ಲಿ ಅವರು ವಾಸಿಸುತ್ತಾರೆ.
► ಸಂಸತ್ತು ಮತ್ತು ವಿಧಾನಸಭೆಗಳಲ್ಲಿರುವ ಕ್ಯಾಂಟೀನುಗಳಲ್ಲಿ ಸಂಸದರು ಮತ್ತು ಶಾಸಕರುಗಳಿಗೆ ಸಬ್ಸಿಡಿಯುಕ್ತ ಆಹಾರ ದೊರಕುತ್ತದೆ.







