ಗುಜರಾತ್ ಬಸ್ ಸ್ಟ್ಯಾಂಡ್ ನ ತಪ್ಪು ಫೋಟೋ ಪೋಸ್ಟ್ ಮಾಡಿ ನಗೆಪಾಟಲಿಗೀಡಾದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ

ಹೊಸದಿಲ್ಲಿ, ಎ.20: ಗುಜರಾತ್ ನಲ್ಲಿ ಲೋಕಾರ್ಪಣೆಗೊಂಡಿದೆ ಎಂದು ಟ್ವಿಟ್ಟರ್ ನಲ್ಲಿ ಬಸ್ ನಿಲ್ದಾಣವೊಂದರ ಫೋಟೊ ಪೋಸ್ಟ್ ಮಾಡಿದ್ದ ಗಾಯಕ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದಾರೆ.
ಟ್ವಿಟ್ಟರ್ ನಲ್ಲಿ ಬಸ್ ನಿಲ್ದಾಣದ ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಸುಪ್ರಿಯೋ, “ಇದು ವಿಮಾನ ನಿಲ್ದಾಣವಲ್ಲ, ಇದು ಲಂಡನ್ ಅಥವಾ ನ್ಯೂಯಾರ್ಕ್ ನಲ್ಲಿಲ್ಲ. ಗುಜರಾತ್ ನ ರಾಜ್ ಕೋಟ್ ನಲ್ಲಿ ಲೋಕಾರ್ಪಣೆಗೊಂಡ ಬಸ್ ನಿಲ್ದಾಣದ ಚಿತ್ರವಾಗಿದೆ ಇದು” ಎಂದಿದ್ದರು.
ಆದರೆ ವಾಸ್ತವವೆಂದರೆ ಬಾಬುಲ್ ಸುಪ್ರಿಯೋ ಪೋಸ್ಟ್ ಮಾಡಿದ್ದ ಚಿತ್ರಗಳು ಲೋಕಾರ್ಪಣೆಗೊಂಡ ಬಸ್ ನಿಲ್ದಾಣದ್ದಾಗಿರಲಿಲ್ಲ. ಬದಲಾಗಿ, ಇನ್ನಷ್ಟೇ ನಿರ್ಮಾಣಗೊಳ್ಳಬೇಕಾಗಿರುವ ಬಸ್ ನಿಲ್ದಾಣದ 3ಡಿ ಕ್ಯಾಡ್ (3D CAD) ಚಿತ್ರಗಳಾಗಿತ್ತು. ಆದರೆ ಈ ಬಗ್ಗೆ ಅರಿವಿರದ ಬಾಬುಲ್ ಈ ಚಿತ್ರಗಳನ್ನು ಹಾಕಿದ್ದಲ್ಲದೆ, “ಇದು ನ್ಯೂಯಾರ್ಕ್ ಅಲ್ಲ, ಲಂಡನ್ ಅಲ್ಲ” ಎಂದು ಹೇಳಿ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಅಪಹಾಸ್ಯಕ್ಕೊಳಗಾದರು.
ಇದಿಷ್ಟೇ ಅಲ್ಲದೆ ಕೇಂದ್ರ ಸಚಿವರ ಟ್ವೀಟನ್ನು ಶೇರ್ ಮಾಡಿದ್ದ ಹರ್ಷ್ ಗೊಯೆಂಕಾ “ಇದು ವಿಮಾನ ನಿಲ್ದಾಣವಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.!
ಬಾಬುಲ್ ಟ್ವೀಟ್ ಮಾಡುತ್ತಿದ್ದಂತೆಯೇ ಈ ಬಗ್ಗೆ ರಿ ಟ್ವೀಟ್ ಮಾಡತೊಡಗಿದ ಟ್ಟಿಟ್ಟರ್ ಮಂದಿ ಸಚಿವರ ಕಾಲೆಳೆಯತೊಡಗಿದರು. “ನಿಮ್ಮಂತಹವರಿಂದ ಚುನಾಯಿತ ಜನಪ್ರತಿನಿಧಿಗಳ ಬುದ್ಧಿಮತ್ತೆಯ ಬಗ್ಗೆ ಜನರು ಅನುಮಾನಪಡಬಹುದು” ಎಂದು ಅಬ್ರಹಾಂ ಎನ್ನುವವರು ಟ್ವೀಟ್ ಮಾಡಿದ್ದಾರೆ. ಜಾವೇದ್ ಅಖ್ತರ್ ಎಂಬವರು ಟ್ವೀಟ್ ಮಾಡಿ, “ಇದೀಗಾಗಲೇ ಸಿದ್ಧವಾಗಿದೆ. ಬಿಜೆಪಿ ಸಂಸದರು ಘೋಷಿಸಿದ ಮೇಲೆ ಸಿದ್ಧವಾಗಿದೆ ಎಂದೇ ಅರ್ಥ. ಸಂಪೂರ್ಣ ಬಸ್ ನಿಲ್ದಾಣವನ್ನು 3ಡಿ ಪ್ರಿಂಟರ್ ಮೂಲಕ ಒಂದೇ ದಿನದಲ್ಲಿ ನಿರ್ಮಿಸಲಾಗಿದೆ” ಎಂದು ಸಚಿವರ ಕಾಲೆಳೆದಿದ್ದಾರೆ.









