ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪಿತೂರಿ: ಪಿ.ಸಿ.ಹಂಝ
ಬೆಂಗಳೂರು, ಎ.20: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದ್ದು, ಶಾಂತಿ, ಜಾತ್ಯತೀತತೆ, ಸಾಮಾಜಿಕ ನ್ಯಾಯ ನಾಶವಾಗುವ ಸ್ಥಿತಿಯಲ್ಲಿದೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ಹಂಝ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜನರ ಸ್ವಾತಂತ್ರವನ್ನು ಹತ್ತಿಕ್ಕುವ ಹುನ್ನಾರಗಳನ್ನು ಕೇಂದ್ರ ಸರಕಾರ ಮಾಡುತ್ತಿದೆ. ಫ್ಯಾಶಿಸ್ಟ್ ಶಕ್ತಿಗಳ ಹಾವಳಿ ಜಾಸ್ತಿಯಾಗುತ್ತಿದ್ದು, ಸರ್ವಾಧಿಕಾರದ ಕರಿನೆರಳು ದೇಶಾದ್ಯಂತ ಹಬ್ಬುತ್ತಿದೆ. ಸಹಸ್ರಾರು ಜನರು ಪ್ರಾಣ ಬಲಿದಾನ ನೀಡಿ, ಹುತಾತ್ಮರಾದರೂ ಜನರ ಆಶೋತ್ತರಗಳು ಇದುವರೆಗೂ ಈಡೇರಿಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಘೋಷಿತ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ಅವರು
500, 1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ, ಭಾರತದ 126 ಕೋಟಿ ಜನರೂ ಅದನ್ನು ಪಾಲಿಸಬೇಕು ಎಂದು ಆದೇಶಿಸುವ ಮೂಲಕ ಹಿಟ್ಲರ್ ಅಧಿಕಾರ ನಡೆಸಲು ಮುಂದಾಗಿದ್ದಾರೆ. ಸಂವಿಧಾನದಡಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ, ಸಂಸತ್‌ನಲ್ಲಿ ಚರ್ಚಿಸದೇ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ದೂರಿದರು.
ಸಂಘ ಪರಿವಾರದ ಕಾರ್ಯಕರ್ತರು ಬೌದ್ಧಿಕ ಕ್ರಿಯಾಶೀಲತೆಯ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ದೇಶದ್ರೋಹಿ ಎಂದು ಪಟ್ಟ ಕಟ್ಟಲಾಗುತ್ತಿದೆ. ಪ್ರಗತಿಪರ ಲೇಖಕ, ಸಾಹಿತಿ, ಚಿಂತಕರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಎಂ.ಎಂ.ಕಲ್ಬುರ್ಗಿ, ಪನ್ಸಾರೆಯನ್ನು ಹತ್ಯೆ ಮಾಡಿದರೂ, ಇದುವರೆಗೂ ನ್ಯಾಯ ಸಿಕ್ಕಿಲ್ಲ. ಮತ್ತೊಂದು ಕಡೆಗೆ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನ ಮಗಳು ಗುರ್ ಮೆಹರ್‌ಕೌರ್ ಹೇಳಿಕೆ ನೀಡಿದ್ದಕ್ಕೆ ಸಂಘ ಪರಿವಾರ ಹಾಗೂ ಎಬಿವಿಪಿ ಕಾರ್ಯಕರ್ತರು ಅತ್ಯಾಚಾರದ ಬೆದರಿಕೆ ಕರೆಗಳು ಕಳಿಸುತ್ತಿದ್ದಾರೆ. ಇದು ಈ ದೇಶದ ದುರಂತವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯಗಳು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಸಂಘಟನೆಯ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಜನರ ಆಹಾರ ಹಕ್ಕಿನ ಮೇಲೆ ವ್ಯವಸ್ಥಿತ ದಾಳಿ ಮಾಡಲು ಮುಂದಾಗಿದ್ದು, ಸಂಘಪರಿವಾರದ ಕಾರ್ಯಕರ್ತರು ಜನರ ಮನೆಗಳಿಗೆ ನುಗ್ಗಿ ಹಲ್ಲೆಗಳನ್ನು ನಡೆಸುತ್ತಿರುವುದು ಸಾಮಾನ್ಯವಾಗಿದೆ. ಕೋಮು ಅಲೆ ಎಬ್ಬಿಸಿ, ಅದರಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ತಂತ್ರಗಾರಿಕೆಯನ್ನು ಬಳಕೆ ಮಾಡುತ್ತಿದೆ ಎಂದು ಹೇಳಿದರು.







