ದುಬೈಯಿಂದ ಆಗಮಿಸಿದ ಪ್ರಯಾಣಿಕನಿಂದ 10.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

ಮಂಗಳೂರು, ಎ. 20: ದುಬೈನಿಂದ ಆಗಮಿಸಿದ ಪ್ರಯಾಣಿಕನೋರ್ವನಿಂದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು 10.5 ಲಕ್ಷ ರೂ. ಮೌಲ್ಯದ 349.8 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡಿನ ಚಟ್ಟಂಚಾಲ್ ನಿವಾಸಿ ಅಬ್ದುರ್ರಝಾಕ್ (49) ಎಂದು ಗುರುತಿಸಲಾಗಿದೆ. ಈತ ಗುದನಾಳದಲ್ಲಿ ಚಿನ್ನವನ್ನಿಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದನೆಂದು ಆರೋಪಿಸಲಾಗಿದೆ.
ದುಬೈಯಿಂದ ಸ್ಪೈಸ್ ಜೆಟ್ ವಿಮಾನ ಮೂಲಕ ಬುಧವಾರ ಸಂಜೆ 6:30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ರಝಾಕ್‌ನನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗುದನಾಳದಲ್ಲಿಟ್ಟು ಸಾಗಾಟ ಮಾಡಿದ್ದ 4 ಚಿನ್ನದ ಬಿಸ್ಕಿಟ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಚಿನ್ನವನ್ನು ತೆಗೆದು ಪರೀಕ್ಷೆ ಮಾಡಿದಾಗ 24 ಕ್ಯಾರೆಟ್ ಶುದ್ಧ ಚಿನ್ನ ಎಂಬುದು ದೃಢಪಟ್ಟಿದೆ.
ಆರೋಪಿಯನ್ನು ತನಿಖೆ ನಡೆಸಿದಾಗ ಈತ ನಿರಂತರ ಅಕ್ರಮ ಚಿನ್ನ ಸಾಗಾಟ ದಂಧೆ ಮಾಡುತ್ತಿದ್ದ ವಿಷಯ ಬಹಿರಂಗಗೊಂಡಿದೆ. ಮಂಗಳೂರು, ಮುಂಬೈ, ಕೋಝಿಕೋಡ್, ನವದೆಹಲಿ, ಅಹ್ಮದಾಬಾದ್, ಚೆನ್ನೈ, ಕೊಚ್ಚಿ, ತಿರುವನಂತಪುರ, ಬೆಂಗಳೂರು, ಗೋವಾ ಮತ್ತು ಲಕ್ನೋ ವಿಮಾನ ನಿಲ್ದಾಣಗಳಲ್ಲಿ ಈತ ಹಲವು ಬಾರಿ ವಿಮಾನದಿಂದ ಇಳಿದಿರುವ ಬಗ್ಗೆ ದಾಖಲೆಯಿಂದ ಗೊತ್ತಾಗಿದೆ.
ದೇಹದೊಳಗಿಟ್ಟುಕೊಂಡು ಸಾಗಾಟ ಮಾಡಿದರೆ ಗೊತ್ತಾಗದು ಎಂದು ತಿಳಿದ ಆರೋಪಿ ಚಿನ್ನ ಸಾಗಾಟಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಮಂಗಳೂರು ಪ್ರಾಂತದ ಉಪನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.







