ಅರಣ್ಯ ಉಳಿವಿಗೆ ಸರ್ವರ ಸಹಕಾರ ಅಗತ್ಯ: ಸಚಿವ ರಮಾನಾಥ ರೈ
ಅರಣ್ಯ ಇಲಾಖೆಯಿಂದ ಉಚಿತ ಅಡುಗೆ ಅನಿಲ ವಿತರಣೆ

ಪುತ್ತೂರು, ಎ.20: ಉರುವಲು ಮತ್ತು ಇನ್ನಿತರ ಕಾರಣಗಳಿಗೆ ಅರಣ್ಯ ನಾಶವಾಗುತ್ತಿದ್ದು, ಅರಣ್ಯದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಅರಣ್ಯ ನಾಶವನ್ನು ತಡೆಯುವ ನಿಟ್ಟಿನಲ್ಲಿ ಕಾಡಿನ ಅಂಚಿನಲ್ಲಿರುವ ಬಡವರಿಗೆ ಇಲಾಖೆಯ ವತಿಯಿಂದ ಉಚಿತವಾಗಿ ಅನಿಲ ಜಾಡಿ ಮತ್ತು ಸ್ಟವ್ ವಿತರಿಸಲಾಗುತ್ತಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಗುರುವಾರ ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಉಚಿತವಾಗಿ ಅನಿಲ ಜಾಡಿ ಮತ್ತು ಸ್ಟವ್ ವಿರಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2,650 ಫಲಾನುವಿಗಳಿಗೆ ಹಾಗೂ ಪುತ್ತೂರು ತಾಲೂಕಿನಲ್ಲಿ 338 ಫಲಾನುವಿಗಳಿಗೆ ಉಚಿತ ಅನಿಲ ಜಾಡಿ ಮತ್ತು ಸ್ಟವ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಮುಕುಂದ, ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ದಿವ್ಯಾ ಪುರುಷೋತ್ತಮ, ತೇಜಸ್ವಿನಿ, ಪ್ರಗತಿಪರ ಕೃಷಿಕ ವೇದನಾಥ ಸುವರ್ಣ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ರಾಜೀವಿ ರೈ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ವಿಬಾಗದ ಉಪಅರಣ್ಯ ಅಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್ ವಂದಿಸಿದರು. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ನಿರೂಪಿಸಿದರು.







