ಎ.23ರಂದು ಮೂಲರಪಟ್ನದಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ
ಬಡ ಹಿಂದೂ ಹೆಣ್ಣುಮಕ್ಕಳಿಗೆ 25 ಸಾವಿರ ರೂ. ಧನ ಸಹಾಯ

ಬಂಟ್ವಾಳ, ಎ.20: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಮತ್ತು ಇದರ ಅಧೀನದಲ್ಲಿರುವ ದಾರುಲ್ ಉಲೂಂ ಮದ್ರಸ ಯುವಕ ಸಮಿತಿ ಇದರ ಅಂಗ ಸಂಸ್ಥೆಯಾದ ನುಸ್ರತುಲ್ ಅನಾಂ ಸ್ವಲಾತ್ ಕಮಿಟಿ ವತಿಯಿಂದ ಎರಡನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಎ.23ರಂದು ಬೆಳಗ್ಗೆ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿ ಸಲಹೆಗಾರ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.
ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸಿರುವವರ ಪೈಕಿ ಅತೀ ಬಡತನದ ಜಮಾಅತ್ ವ್ಯಾಪ್ತಿಯ ಸೇರಿದಂತೆ ಸುತ್ತಮುತ್ತಲಿನ ಒಟ್ಟು 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಲಿಸಲಿವೆ. ಪ್ರತೀ ಜೋಡಿಗೆ ಒಂದು ಲಕ್ಷದ ಎಪ್ಪತ್ತು ಸಾವಿರ ರೂ. ಮೌಲ್ಯದ ವಸ್ತ್ರಾಭರಣಗಳನ್ನು ವಿತರಿಸಲಾಗುವುದು. ಹಾಗೆಯೇ ಹಿಂದೂ ಸಮುದಾಯದ ಕಡು ಬಡತನದ ಹೆಣ್ಣುಮಕ್ಕಳನ್ನು ಗುರುತಿಸಿ ಅವರ ವಿವಾಹ ಕಾರ್ಯಕ್ಕೆ ತಲಾ 25 ಸಾವಿರ ರೂ. ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸೈಯದ್ ಅಬ್ದುಲ್ ಗಪೂರ್ ತಂಙಳ್ ಪಾಣಕ್ಕಾಡ್ ದುಆಶೀರ್ವಚನ ನೀಡಲಿದ್ದು, ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ಲಾ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವ, ಅಯಚಂದ್ರ ಜೈನ್, ಐವನ್ ಡಿಸೋಜ, ಎಸ್ಪಿ ಭೂಷಣ್ ಜಿ. ಬೊರಸೆ, ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವರದಕ್ಷಿಣೆ ರಹಿತವಾಗಿ ನಮ್ಮ ಸಮುದಾಯದ ಸಹೋದರಿಯರ ವಿವಾಹವು ಸರಳ ರೀತಿಯಲ್ಲಿ ಆಚರಿಸಬೇಕೆಂಬ ಉದ್ದೇಶದಿಂದ ಎರಡು ವರ್ಷಗಳಲ್ಲಿ ಮೂಲರಪಟ್ನ ಜಮಾಅತ್‌ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಜಮಾಅತ್‌ನ ದಾನಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಾಹ ಸಮಿತಿಯ ಅಧ್ಯಕ್ಷ ಎಂ.ಎ.ಹಮ್ಮಬ್ಬ, ಪದಾಧಿಕಾರಿಗಳಾದ ಎಂ.ಎ.ಮೊಯ್ದಿನಬ್ಬ, ಶಾಲಿ, ಅಬ್ದುಲ್ ರಹ್ಮಾನ್, ಸಜೂಯುದ್ದೀನ್, ಪಂಚಾಯತ್ ಸದಸ್ಯ ಅಶ್ರಫ್ ಉಪಸ್ಥಿತರಿದ್ದರು







