ರಸ್ತೆ ಅಪಘಾತ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ: ಮಡಿಕೇರಿ ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಎ.20: ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಹೆಚ್ಚು ಒತ್ತು ನೀಡುವಂತಾಗಬೇಕು. ಶಾಲಾ ಕಾಲೇಜುಗಳ ಹಳೇ ವಾಹನಗಳನ್ನು ಬದಲಿಸಿ ವೇಗ ನಿಯಂತ್ರಕವನ್ನು ಕಡ್ಡಾಯವಾಗಿ ಅಳವಡಿಸಲು ಶಿಕ್ಷಣ ಇಲಾಖೆ ಬಿಇಒಗಳಿಗೆ ನಿರ್ದೇಶನ ನೀಡಿದರು.
ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ರಸ್ತೆ ಸುರಕ್ಷತೆಗಳ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು ಮಾಡಬೇಕು. ಸೋಮವಾರಪೇಟೆ, ಸಿದ್ದಾಪುರ ರಸ್ತೆಗಳಲ್ಲಿ ಮುಖ್ಯವಾಗಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಫಲಕಗಳನ್ನು ಅಳವಡಿಸಿ, ಅವೈಜ್ಞಾನಿಕ ರಸ್ತೆ ವಿಜಕಗಳನ್ನು ಮತ್ತು ಉಬ್ಬುಗಳನ್ನು ತೆರವು ಮಾಡಬೇಕು. ಅಪಘಾತ ಮತ್ತು ಜೀವಹಾನಿಯನ್ನು ತಡೆಗಟ್ಟುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.
ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ರಸ್ತೆ ಸುರಕ್ಷತೆಗೆ ಸಂಬಂದಿಸಿದಂತೆ ಮಾನದಂಡಗಳನ್ನು ತಪ್ಪದೇ ಪಾಲಿಸುವಂತೆ ಆರ್.ಟಿ.ಒ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಚಾರುಲತಾ ಸೋಮಲ್, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಜರಿದ್ದರು.







