33 ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯ ನಿರ್ಣಾಯಕ: ಎಚ್.ಡಿ.ದೇವೇಗೌಡ

ಬೆಂಗಳೂರು, ಎ.20: ರಾಜ್ಯದ 33 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯ ನಿರ್ಣಾಯಕವಾಗಿದ್ದು, ಎಲ್ಲರೂ ಒಗ್ಗೂಡುವ ಮೂಲಕ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಉಪ್ಪಾರ ಸಭೆಯಲ್ಲಿ ಮಾತನಾಡಿದ ಅವರು, "ಉಪ್ಪಾರ, ನಾಯಕ ಹಾಗೂ ಮತ್ತಿತರ ಜನಾಂಗವನ್ನು ಎಸ್ಟಿಗೆ ಸೇರಿಸಬೇಕೆಂದು ಶತಪ್ರಯತ್ನ ಪಟ್ಟಿದ್ದೆ. ಪ್ರಧಾನಿ ಚಂದ್ರಶೇಖರ್ ನನ್ನನ್ನು ಮಂತ್ರಿ ಮಾಡುವುದಾಗಿ ತಿಳಿಸಿದ್ದರು. ಆದರೆ, ಇದಕ್ಕೆ ಒಪ್ಪದೆ ಉಪ್ಪಾರರನ್ನು ಎಸ್ಟಿಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದೆ" ಎಂದು ಸ್ಮರಿಸಿದರು.
ಹತ್ತು ವರ್ಷಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ನೋಡಿ ಬೇಸತ್ತಿರುವ ರಾಜ್ಯದ ಜನತೆ ಜೆಡಿಎಸ್ ಮೇಲೆ ಒಲವನ್ನು ತೋರುತ್ತಿದ್ದಾರೆ. ಇದಕ್ಕೆ ಉಪ್ಪಾರ ಸಮುದಾಯವು ಕೈ ಜೋಡಿಸಬೇಕು, ಉಪ್ಪಾರರು ಒಗ್ಗಟ್ಟಾಗಿ ಜೆಡಿಎಸ್ ಪರವಾಗಿ ನಿಲ್ಲಬೇಕು, 33 ಕ್ಷೇತ್ರಗಳಲ್ಲಿ ನಿಮ್ಮ ಮತವೇ ನಿರ್ಣಾಯಕ ಎಂಬುದು ನಿಮಗೆ ತಿಳಿದಿರಲಿ ಎಂದು ಅವರು ಹೇಳಿದರು.
ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜನ ಬಯಸಿದ್ದಾರೆ. ನಮಗೆ 120 ಸ್ಥಾನ ಗೆಲ್ಲಿಸಿ ಕೊಡಿ, ಶಕ್ತಿ ತುಂಬಿ, ಇಲ್ಲವಾದರೆ ಸಾಲ ಮನ್ನಾ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ ದೇವೇಗೌಡ, ಕುಮಾರಸ್ವಾಮಿಯ ಆರೋಗ್ಯ ಸರಿ ಇಲ್ಲ, ಆದರೂ ಪಕ್ಷಕ್ಕಾಗಿ ಶಕ್ತಿಮೀರಿ ಓಡಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಸಿ.ನೀರಾವರಿ, ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ಈಶ್ವರಯ್ಯ ಮತ್ತಿತರರು ಭಾಗವಹಿಸಿದ್ದರು.







