ಸುಪ್ರೀಂಕೋರ್ಟ್ ಆದೇಶ ಸ್ವಾಗತಾರ್ಹ: ಮುಫ್ತಿ ಅಶ್ರಫ್ ಅಲಿ
ಬೆಂಗಳೂರು, ಎ.20: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಸೇರಿದಂತೆ ಇನ್ನಿತರರ ವಿರುದ್ಧ ಒಳಸಂಚು ಆರೋಪದ ವಿಚಾರಣೆಯನ್ನು ಮುಂದುವರೆಸಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ ಎಂದು ಅಮೀರೆ ಶರಿಯತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಹೇಳಿದ್ದಾರೆ
ಗುರುವಾರ ನಗರದ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್)ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನೀಡಿರುವ ಆದೇಶವು ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ ಎಂದರು.
ಉತ್ತರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಸರಕಾರಗಳು ಬದಲಾದ ಹಿನ್ನೆಲೆಯಲ್ಲಿ ಮುಸ್ಲಿಮರಲ್ಲಿ ಅಭದ್ರತೆಯ ವಾತಾವರಣ ಮೂಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇವೆಲ್ಲ ತಾತ್ಕಾಲಿಕವಾದದ್ದು. ಚುನಾವಣೆಗಳಲ್ಲಿ ಸೋಲು, ಗೆಲುವು, ಹೊಸ ಸರಕಾರಗಳು ರಚನೆಯಾಗುವುದು ಸಾಮಾನ್ಯ ಪ್ರಕ್ರಿಯೆ ಎಂದು ಅವರು ಹೇಳಿದರು.
ಭಾರತದ ಸಂವಿಧಾನವು ಮುಸ್ಲಿಮರಿಗೆ ಎಲ್ಲ ರೀತಿಯ ಹಕ್ಕುಗಳು, ರಕ್ಷಣೆಯನ್ನು ಒದಗಿಸಿದೆ. ಅದರ ಮಾರ್ಗದರ್ಶನದಲ್ಲಿ ನಾವು ನ್ಯಾಯಸಮ್ಮತವಾಗಿ ಮುಂದುವರೆಯ ಬೇಕಿದೆ. ಯಾವುದೆ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಜಾತ್ಯತೀತ ಮನಸ್ಥಿತಿಯ ಬಹುದೊಡ್ಡ ಸಮೂಹ ನಮ್ಮಿಂದಿಗಿದೆ ಎಂದು ಅಶ್ರಫ್ ಅಲಿ ತಿಳಿಸಿದರು.
ಜಾತ್ಯತೀತ, ಸೌರ್ಹಾದ ಮನಸ್ಥಿತಿಯ ಜನಸಮೂಹದೊಂದಿಗೆ ಬೆರೆತು ನಾವು ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಆದರೆ, ಕೆಲವು ವ್ಯಕ್ತಿಗಳು ದೇಶ ಹಾಗೂ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸುವುದನ್ನು ಬಯಸುತ್ತಿಲ್ಲ. ಇಂತಹವರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.







