ಬಾಲ ಕಾರ್ಮಿಕ, ಬಾಲ್ಯವಿವಾಹ ತಡೆಗೆ ಜನಜಾಗೃತಿ ಮೂಡಿಸಿ: ಉಡುಪಿ ಜಿಲ್ಲಾಧಿಕಾರಿ ಕರೆ

ಉಡುಪಿ, ಎ.20: ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ತಡೆಗೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಜೊತೆ ಸೇರಿ ಗುರುತಿಸಲಾದ ಕಾಲನಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸಲಹೆ ನೀಡಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ. ಮಕ್ಕಳಿಗೆ ರಜೆ ಇರುವ ಕಾಲದಲ್ಲಿ ಅವರ ಮೇಲೆ ವಿಶೇಷ ಗಮನವಿರಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕೇಬಲ್ ಟಿವಿ ಚಾನೆಲ್‌ಗಳ ಮೂಲಕ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆ ನಿರ್ಮಿಸಿರುವ ಜಾಗೃತಿ ಕಾರ್ಯಕ್ರಮ, ಕಾನೂನು ಕ್ರಮಗಳ ಮಾಹಿತಿಯನ್ನು ನೀಡಲು ಇಲಾಖೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಭಿಕ್ಷಾಟನೆ ಹೆಚ್ಚುತ್ತಿರುವ ಬಗ್ಗೆ ಎನ್‌ಜಿಒ ಒಬ್ಬರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಕಠಿಣಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಪ್ರಿಯಾಂಕಾ, ಭಿಕ್ಷಾಟನೆ ನಡೆಸುವ ಮಕ್ಕಳ ಹೆತ್ತವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಿಳಿಸಿದರು. ಜಾಗೃತಿ ಕಾರ್ಯಕ್ರಮಗಳನ್ನು ಎ.30ರೊಳಗೆ ಮುಗಿಸುವಂತೆ ತಿಳಿಸಿದ ಅವರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಿರುವ ಸಾಂತ್ವನ ಹಾಗೂ ಸ್ಟೇಟ್‌ಹೋಮ್ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕೆ ಪೊಲೀಸ್ ಇಲಾಖೆ ಕೈಜೋಡಿಸುವಂತೆ ಕರೆ ನೀಡಿದರು.
ಪೊಲೀಸ್ ಠಾಣೆಗಳಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದನ್ನು ಈ ಬಾರಿಯೂ ಸಾಂತ್ವನ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಂತಹ ಘಟನೆಗಳ ಬಗ್ಗೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡುವಂತೆ ಸಲಹೆ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಸ್ ಪಿ ಕುಮಾರಸ್ವಾಮಿ, ಕಾರ್ಕಳ ಠಾಣೆಯಲ್ಲಿ ಖುದ್ದು ಉಪಸ್ಥಿತರಿದ್ದು, ಸಾಂತ್ವನ ಕೇಂದ್ರದ ಎಲ್ಲ ದೂರುಗಳನ್ನು ಪರಿಶೀಲಿಸುವ ಭರವಸೆ ನೀಡಿದರು.
2016ರ ಡಿಸೆಂಬರ್‌ನಿಂದ 2017ರ ಮಾರ್ಚ್‌ವರೆಗೆ ಒಟ್ಟು 390 ದೂರುಗಳು ದಾಖಲಾಗಿದ್ದು, 135 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. 255 ಪ್ರಕರಣಗಳು ಬಾಕಿ ಇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾಹಿತಿ ನೀಡಿದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ ಬಗ್ಗೆ ಎಲ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗ್ರಾಮ ಮಟ್ಟದ ಕಾರ್ಯಕ್ರಮಗಳಲ್ಲಿ, ಆರೋಗ್ಯ ಇಲಾಖೆ ಕಾರ್ಯಾಗಾರಗಳಲ್ಲಿ, ಸ್ತ್ರೀಶಕ್ತಿ ಒಕ್ಕೂಟದ ಸಭೆಗಳಲ್ಲಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸ್ತ್ರೀಶಕ್ತಿ ಗುಂಪುಗಳ ಸಭೆಗಳಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆಗಟ್ಟುವ ತಾಲೂಕು ಮಟ್ಟದ ಕಾವಲು ಸಮಿತಿ ಸಭೆಯನ್ನು ನಡೆಸಲಾಗಿದೆ ಎಂದೂ ಗ್ರೇಸಿ ವಿವರಿಸಿದರು.







