ಮಾದಕ ವಸ್ತುಗಳಿಂದ ದೂರವಿರಿ: ಯುವ ಜನತೆಗೆ ಅರ್ಶದಿ ಕರೆ
ಅಡ್ಕ ಹಝ್ರತ್ ಶೇಖ್ ಮಹ್ಮೂದ್ ವಲಿಯುಲ್ಲಾಹ್ ಉರೂಸ್

ಮಂಗಳೂರು, ಎ. 20: ಇಸ್ಲಾಂ ಧರ್ಮವು ನಿಷೇಧಿಸಿರುವ ಮಾದಕ ವಸ್ತುಗಳ ಸೇವನೆ ಹಾಗೂ ಧೂಮಪಾನಗಳಿಂದ ದೂರ ಉಳಿಯುವಂತೆ ಕಣ್ಣೂರು ಬೋರುಗುಡ್ಡೆಯ ಉಸ್ಮಾನ್ ಬಿನ್ ಅಫ್ವಾನ್ ಮಸೀದಿಯ ಮುದರ್ರಿಸ್ ಶರೀಫ್ ಅರ್ಶದಿ ಸವಣೂರು ಯುವ ಜನತೆಗೆ ಕರೆ ನೀಡಿದ್ದಾರೆ.
ಬೈಕಂಪಾಡಿ ಸಮೀಪದ ಅಡ್ಕ ಹಝ್ರತ್ ಶೇಖ್ ಮಹ್ಮೂದ್ ವಲಿಯುಲ್ಲಾಹ್ ಉರೂಸ್ ಮತ್ತು ನವೀಕೃತ ಗೌಸಿಯಾ ಮಸೀದಿ ಹಾಗೂ ದರ್ಗಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ 6ನೆ ದಿನವಾದ ಗುರುವಾರ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಅಮಲು ಪದಾರ್ಥಗಳಿಗೆ ತಮ್ಮ ಹಣವನ್ನು ವಿನಿಯೋಗಿಸಿ ಪಾಪಗಳನ್ನು ಕಟ್ಟಿಕೊಳ್ಳುವ ಬದಲು ತಮ್ಮ ಕೌಟುಂಬಿಕ ನಿರ್ವಹಣೆಗೆ ಬಳಸುವ ಮೂಲಕ ಸದ್ವಿನಿಯೋಗಗೊಳ್ಳಬೇಕು. ದುಶ್ಚಟಗಳ ದಾಸರಾಗದೆ ಹಾಗೂ ಲೌಕಿಕ ಜೀವನದಲ್ಲಿ ಮೈಮರೆಯದೆ ಅಧ್ಯಾತ್ಮಿಕ ಜೀವನದ ಕಡೆಗೆ ಚಿಂತಿಸುವಂತೆ ಮತ್ತು ದುರ್ಬಲ, ಅಶಕ್ತರಿಗೆ ನೆರವು ನೀಡುವಂತೆ ಅವರು ಹೇಳಿದರು.
ಬೈಕಂಪಾಡಿ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಸೀದಿ ಸಮಿತಿಯ ಉಪಾಧ್ಯಕ್ಷ ಚೈಬಾವ, ಮಸೀದಿಯ ಖತೀಬ್ ಹೈದರಾಲಿ ಸಖಾಫಿ, ತೋಕೂರು ಮುಹಮ್ಮದಿಯಾ ಮದ್ರಸ ಅಧ್ಯಕ್ಷ ಇಬ್ರಾಹೀಂ ಉಪಸ್ಥಿತರಿದ್ದರು. ಮಸೀದಿಯ ಆಡಳಿತ ಸಮಿತಿ ಸದಸ್ಯ ಬಿ.ಎ.ಖಾದರ್ ಸ್ವಾಗತಿಸಿದರು.
ಶುಕ್ರವಾರ ಸಮಾರೋಪ
ಶುಕ್ರವಾರ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ಅಂದು ಅಡ್ಕ ಹಾಲ್‌ನ ವಿಸ್ತರಿತ ಕಟ್ಟಡ ಉದ್ಘಾಟನೆ, ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆ ನೆವವೇರಲಿದೆ. ಸಚಿವರಾದ ರಮಾನಾಥ, ರೋಶನ್ ಬೇಗ್, ಯುಟಿ.ಖಾದರ್, ಪ್ರಿಯಾಂಕ ಖರ್ಗೆ ಭಾಗವಹಿಸಲಿದ್ದಾರೆ.







