ಬಂಟ್ವಾಳ : ವಿದ್ಯುತ್ ತಂತಿ ತಗಲಿ ಯುವಕ ಮೃತ್ಯು
ಬಂಟ್ವಾಳ, ಎ. 21: ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟ ಘಟನೆ ಸಂಭವಿಸಿದೆ.
ತಾಲೂಕಿನ ಕುಕ್ಕಿಪಾಡಿ ಗ್ರಾಮದ ಹಲಾಯಿ ನಿವಾಸಿ ದಿ. ಜಿನ್ನಪ್ಪ ಪೂಜಾರಿ ಎಂಬವರ ಪುತ್ರ ವಸಂತ ಪೂಜಾರಿ(37) ಮೃತ ಪಟ್ಟವರು. ಮೃತರು ಪತ್ನಿ ಮತ್ತು ಒಂದು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಅವರು ಬಂಟ್ವಾಳ ವಿದ್ಯುತ್ ಗುತ್ತಿಗೆ ಸಂಸ್ಥೆಯಲ್ಲಿ ದಿನಗೂಲಿ ನೌಕರನಾಗಿದ್ದರು.
ಎ. 17ರಂದು ರಾತ್ರಿ ಹಲಾಯಿ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದ ವೇಳೆ ಅವರು ವಿದ್ಯುತ್ ಪರಿವರ್ತಕಕ್ಕೆ ಫ್ಯೂಸ್ ಹಾಕಲು ಮೇಲೇರಿದ್ದು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತತ್‌ಕ್ಷಣ ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಮೃತರ ಸಹೋದರ ನಾರಾಯಣ ಪೂಜಾರಿ ಅವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





