ಮಂಗಳೂರು ವಿವಿಯಲ್ಲಿ ಸರ್ ಸಿ.ವಿ.ರಾಮನ್ ವೃತ್ತ , ಕ್ಲಾಕ್ ಟವರ್ ಉದ್ಘಾಟನೆ

ಕೊಣಾಜೆ,ಎ.21: ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ್ಲ ಆಕರ್ಷಕವಾಗಿ ನಿರ್ಮಾಣಗೊಂಡಿರುವ ಸರ್. ಸಿ.ವಿ.ರಾಮನ್ ವೃತ್ತ ಹಾಗೂ ಕ್ಲಾಕ್ ಟವರ್ ಉದ್ಘಾಟನೆಯನ್ನು ಸಿಂಗಾಪುರ್ ನಾನ್ಯಾಂಗ್ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯದ ಹಿರಿಯ ಕಾರ್ಯಗಾರಿ ನಿರ್ದೇಶಕ ಹಾಗೂ ವಿಜ್ಞಾನಿ ಪ್ರೊ.ಬಿ.ವಿ.ಆರ್. ಚೌಧರಿ ಅವರು ಅವರು ಗುರುವಾರ ನೆರವೇರಿಸಿದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವೆರು ಮಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು ದೇಶದ ಪ್ರತಿಷ್ಟಿತ ವಿವಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಯಾವುದೇ ವಿಶ್ವವಿದ್ಯಾಲಯವು ಸಂಶೋಧನೆಗೆ ಒತ್ತುಕೊಡದಿದ್ದರೆ ಗುಣಮಟ್ಟವು ಕೂಡಾ ಬೆಳವಣಿಗೆಯಾಗಲು ಸಾಧ್ಯವಿಲ್ಲ. ಅಲ್ಲದೆ ಇದೀಗ ಕ್ಯಾಂಪಸ್‌ನಲ್ಲಿ ಸುಂದರವಾದ ವೃತ್ತ ನಿರ್ಮಾಣವಾಗಿದ್ದು ಇದಕ್ಕೆ ಸರ್ ಸಿ.ವಿ.ರಾಮನ್ ಹೆಸರಿಟ್ಟಿದ್ದು ಇದರ ಮೌಲ್ಯವನ್ನು ಹೆಚ್ಚಿಸಿದೆ. ಈ ಸಿ.ವಿ.ರಾವನ್ ವೃತ್ತವು ಮುಂದಿನ ದಿನಗಳಲ್ಲಿ ವಿವಿಯ ಪ್ರಮುಖ ಆಕರ್ಷಕ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಸಿ.ವಿ.ರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದುದು. ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ವೈಫೈ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ವಿಸ್ತರಣೆ ಮಾಡಲಾಗಿದ್ದು ಅದೇ ರೀತಿ ಕ್ಯಾಂಪಸ್‌ನ ಸೌಂದರ್ಯವನ್ನು ವಿಸ್ತರಿಸಲು ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಇದೀಗ ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಿರುವ ಸರ್ ಸಿ.ವಿ.ರಾಮನ್ ವೃತ್ತ ಕ್ಯಾಂಪಸ್ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಹಾಗೂ ವಿವಿಯ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಎಂ ಉಪಸ್ಥಿತರಿದ್ದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.







