ರೈಲು ಸಂಚಾರದಲ್ಲಿ ಸಮಯ ಪರಿಪಾಲನೆಗೆ ಆದ್ಯತೆ : ಇಲಾಖೆ

ಹೊಸದಿಲ್ಲಿ, ಎ.21: ವಿವಿಧ ಕಾರಣಗಳಿಂದಾಗಿ ದೇಶದಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಯನ್ನು ನಿವಾರಿಸಲು ರೈಲ್ವೇ ಇಲಾಖೆ ಮುಂದಾಗಿದೆ.
2016ರ ಎಪ್ರಿಲ್ 1ಕ್ಕೆ ಅನ್ವಯಿಸುವಂತೆ ರೈಲ್ವೇಯ ಸಮಯಪಾಲನೆ ದರ ಶೇ.79 ಆಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇ.84ರಷ್ಟಿತ್ತು . ಹೆಚ್ಚಿನ ಸಂದರ್ಭದಲ್ಲಿ ಮಂಜಿನ ಸಮಸ್ಯೆ ರೈಲು ಸಂಚಾರ ವ್ಯತ್ಯಯಗೊಳ್ಳಲು ಕಾರಣವಾಗಿದೆ. 2016-17ರಲ್ಲಿ ಮಂಜಿನ ಸಮಸ್ಯೆಯಿಂದ ಸುಮಾರು 3700 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ರೈಲು ಸಂಚಾರ ವಿಳಂಬಕ್ಕೆ ಸಾಮರ್ಥ್ಯದ ನಿರ್ಬಂಧ ಮತ್ತು ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿವೆ. 2016ರ ನವೆಂಬರ್‌ನಿಂದ 2017ರ ಫೆಬ್ರವರಿವರೆಗಿನ ಅವಧಿಯಲ್ಲಿ ಮಂಜಿನ ಸಮಸ್ಯೆಯಿಂದ ಸುಮಾರು 15000 ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ.
ರೈಲುಗಳ ಸಂಚಾರದಲ್ಲಿ ಸಮಯ ಪರಿಪಾಲನೆ ಇಲಾಖೆಯ ಆದ್ಯತೆಯಾಗಿದೆ. ರೈಲು ಸೇವೆಗಳನ್ನು ಸುಧಾರಿಸಲು ಮತ್ತು ರೈಲುಗಳ ಸಂಚಾರದಲ್ಲಿ ಸಮಯ ಪರಿಪಾಲನೆಗೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೇ ಬೋರ್ಡ್ ಮಂಡಳಿ ಸದಸ್ಯ ಮುಹಮ್ಮದ್ ಜಮ್‌ಷೇಡ್ ತಿಳಿಸಿದ್ದಾರೆ.





