ವಕೀಲರ ಕಾಯಿದೆ ತಿದ್ದುಪಡಿಗೆ ವಿರೋಧ : ಕರುಡು ಪ್ರತಿ ಸುಟ್ಟು ಪ್ರತಿಭಟಿಸಿದ ನ್ಯಾಯವಾದಿಗಳು

ತುಮಕೂರು,ಏ.21:ಕಾನೂನು ಆಯೋಗವು ಶಿಫಾರಸ್ಸು ಮಾಡಿರುವ ವಕೀಲರ ಕಾಯಿದೆ ತಿದ್ದುಪಡಿ ವಿರೋಧಿಸಿ ತುಮಕೂರಿನಲ್ಲಿ ವಕೀಲರು ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಾರಿಗೆ ತರಲು ಹೊರಟಿರುವ ಉದ್ದೇಶಿತ ವಕೀಲರ ತಿದ್ದುಪಡಿ ಕಾಯಿದೆಯು ವಕೀಲರಿಗೆ ಲಭ್ಯವಿರುವ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರ ಹೊಂದಿದೆ.ನ್ಯಾಯಾಲಯದ ಪ್ರಕರಣಗಳಲ್ಲಿ ವಕೀಲರು ಮುಕ್ತವಾಗಿ ವಾದಿಸುವ ಅವಕಾಶಗಳು ಇರಬೇಕು. ಇದು ಭಾರತ ಸಂವಿಧಾನದ ಪ್ರಕಾರ ಲಭ್ಯವಾಗಿರುವ ಹಕ್ಕು. ಆದರೆ ಉದ್ದೇಶಿತ ತಿದ್ದುಪಡಿ ಕಾಯಿದೆಯು ಈ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ . ಯಾವುದೇ ತಿದ್ದುಪಡಿ ಜಾರಿಗೆ ತರುವ ಮುನ್ನ ಬಹಿರಂಗವಾಗಿ ಅದರ ಬಗ್ಗೆ ಚರ್ಚೆ ನಡೆಯಬೇಕು. ಆಕ್ಷೇಪಣೆಗಳನ್ನು ಸ್ವೀಕರಿಸಬೇಕು. ಕೆಲವೇ ದಿನಗಳ ಅವಕಾಶ ಕೊಟ್ಟು ತಿದ್ದುಪಡಿ ಮಾಡಿ ಕಾನೂನು ತರಲು ಹೊರಟಿರುವುದು ಒಳ್ಳೆಯದಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಉದ್ದೇಶಿತ ತಿದ್ದುಪಡಿ ಕಾಯಿದೆಯ ಅನ್ವಯ ಕಕ್ಷಿದಾರರೊಬ್ಬರು ವಕೀಲರ ವಿರುದ್ಧ ವಿನಾಕಾರಣ ದೂರು ನೀಡಲು ಅವಕಾಶ ನೀಡಿದಂತಾಗುತ್ತದೆ.ಈ ಸಂದರ್ಭದಲ್ಲಿ ವಕೀಲರ ಸನ್ನದನ್ನು ಅಮಾನತ್ತಿನಲ್ಲಿಡಲಾಗುತ್ತದೆ. ಅವರ ಮೇಲೆ ವಿಚಾರಣೆ ಎದುರಾಗುತ್ತದೆ. ವಕೀಲರೇನು ಸರಕಾರಿ ಅಧಿಕಾರಿಗಳಲ್ಲ. ಅಮಾನತ್ತಿನಲ್ಲಿಟ್ಟ ಸಂದರ್ಭದಲ್ಲಿ ಜೀವನೋಪಾಯಕ್ಕೆ ಬೇರೆ ಯಾವುದೇ ಮಾರ್ಗಗಳು ಇರುವುದಿಲ್ಲ.ಹೀಗಾಗಿ ಏಕಪಕ್ಷೀಯವಾಗಿ ತಂದಿರುವ ಇಂತಹ ಬದಲಾವಣೆಗಳು ಸಂವಿಧಾನ ವಿರೋಧಿ ಎಂದು ಪ್ರತಿಭಟನಾನಿರತ ವಕೀಲರು ದೂರಿದರು.
ತಿದ್ದುಪಡಿ ಕಾಯಿದೆಯಲ್ಲಿ ವಿದೇಶಿ ವಕೀಲರು ಮತ್ತು ವಿದೇಶಿ ವಕೀಲರ ಕಂಪನಿಗಳು ಭಾರತ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ನಮ್ಮ ದೇಶದಲ್ಲೇ ಇರುವ ವಕೀಲರಿಗೆ ದೊಡ್ಡ ಪೆಟ್ಟು ಬೀಳುತ್ತದೆ. ವಕೀಲರ ಪರಿಷತ್ತು, ವಕೀಲರ ಸಂಘಗಳು ತಮ್ಮ ಸ್ವಾಯತ್ತ ಅಧಿಕಾರವನ್ನು ಕಳೆದುಕೊಳ್ಳುತ್ತವೆ. 1961 ರಲ್ಲಿ ಜಾರಿಗೆ ಬಂದಿರುವ ವಕೀಲರ ಕಾಯಿದೆಯ ಉದ್ದೇಶಗಳಿಗೆ ವಿರುದ್ಧವಾಗಿ ತಿದ್ದುಪಡಿ ಕಾಯಿದೆ ತರಲಾಗುತ್ತಿದ್ದು, 2017ರ ತಿದ್ದುಪಡಿ ಕಾಯಿದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒತ್ತಾಯಿಸಿ ತುಮಕೂರಿನ ವಕೀಲರು ತಮ್ಮ ಸಂಘದ ಮುಖೇನ ಜಿ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಕೆ.ಎಚ್.ಹರಿಕುಮಾರ್,ಉಪಾಧ್ಯಕ್ಷ ಟಿ.ಎನ್.ಗುರುರಾಜ್,ಕಾರ್ಯದರ್ಶಿ ಟಿ.ಎಚ್.ಕುಮಾರ್, ಖಜಾಂಚಿ ಆರ್.ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಹಿರಿಯ, ಕಿರಿಯ ವಕೀಲರುಗಳು ಪಾಲ್ಗೊಂಡಿದ್ದರು.







